ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ಸಿದ್ದತೆ
ಚಾಮರಾಜನಗರ:”ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ” ಯನ್ನು ದಿನಾಂಕ: 15-09-2024ರಂದು ಕರ್ನಾಟಕ ರಾಜ್ಯಾದ್ಯಂತ ಬೀದರ್ ಜಿಲ್ಲೆಯ ಬಸವ ಕಲ್ಯಾಣದಿಂದ ಚಾಮರಾಜನಗರ ಜಿಲ್ಲೆಯವರೆಗೆ ರಾಜ್ಯದ ಎಲ್ಲಾ 31 ಜಿಲ್ಲೆಗಳನ್ನು ಒಳಗೊಂಡಿರುವ ಅತಿ ಉದ್ದದ “ಮಾನವ ಸರಪಳಿ” ಯನ್ನು ಕರ್ನಾಟಕ ಸರ್ಕಾರವು ಸುಮಾರು 25.00 ಲಕ್ಷ ಜನರು, 10 ಸಾವಿರ ಸಸಿ ನೆಡುವುದು, 5 ಸಾವಿರ ಸಂವಿಧಾನ ಪೀಠಿಕೆ ಓದುವುದು ಮತ್ತು 2,500 ಕಿಲೋ ಮೀಟರ್ ಒಳಗೊಂಡ ಮಾನವ ಸರಪಳಿ ನಿರ್ಮಾಣ ಮಾಡುವ ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಮಾನವ ಸರಪಳಿ ನಿರ್ಮಿಸುವ ಕಾರ್ಯಕ್ರಮವು ದಿನಾಂಕ: 15-09-2024ರಂದು ಭಾನುವಾರ ಬೆಳಿಗ್ಗೆ 8.30 ರಿಂದ 10.30 ರವರೆಗೆ ಏಕಕಾಲದಲ್ಲಿ ರಾಜ್ಯಾದ್ಯಂತ ಆರಂಭವಾಗಲಿದ್ದು, ಚಾಮರಾಜನಗರ ಜಿಲ್ಲೆಯ ಆರಂಭದ ಸರಹದ್ದಾದ ಮೂಗೂರು ಕ್ರಾಸ್‌ನಿಂದ ಪಚ್ಚಪ್ಪ ವೃತ್ತದವರೆಗೆ ಮಾನವ ಸರಪಳಿಯನ್ನು ಹಾಗೂ ಸುಮಾರು 1 ಕಿಲೋ ಮೀಟರ್‌ವರೆಗೆ ಭಾರತದ ತ್ರಿವರ್ಣ ಧ್ವಜವನ್ನು ಪಚ್ಚಪ್ಪ ವೃತ್ತದಿಂದ ವರ್ತಕರ ಭವನದವರೆಗೆ ತ್ರಿವರ್ಣ ಧ್ವಜ ಹಿಡಿಯುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಮಾನವ ಸರಪಳಿ ಕಾರ್ಯಕ್ರಮವು ಒಟ್ಟು 24 ಕಿಲೋ ಮೀಟರ್ ವ್ಯಾಪ್ತಿಯನ್ನು ಹೊಂದಿರುತ್ತದೆ. ಈ ಕಾರ್ಯಕ್ರಮಕ್ಕೆ ಸುಮಾರು 19,200 ಜನರು ಭಾಗವಹಿಸಲಿದ್ದು, ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರುಗಳು ಜಿಲ್ಲಾಧಿಕಾರಿಗಳು ಜಿಲ್ಲಾ ವರಿಷ್ಠಾಧಿಕಾರಿಗಳು ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳು, ಗಣ್ಯರು ಪ್ರಜಾಪ್ರಭುತ್ವದ ಆಶಯವನ್ನು ಎತ್ತಿಹಿಡಿಯುವ ಉದ್ದೇಶದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು
ಮೂಗೂರು ಕ್ರಾಸ್‌ನಿಂದ ಪ್ರತಿ 100 ಮೀಟರ್‌ಗೆ ಒಬ್ಬೊಬ್ಬ ವಿವಿಧ ಇಲಾಖೆಯ ಸಿಬ್ಬಂದಿ ಮತ್ತು ಒಬ್ಬರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತದೆ. ಪ್ರತಿ 500 ಮೀಟರ್ ಒಬ್ಬ ತಾಲ್ಲೂಕು ಮಟ್ಟದ ಅಧಿಕಾರಿ, ಪ್ರತಿ 1 ಕಿಲೋ ಮೀಟಗೆರ್‌ಗೆ ಜಿಲ್ಲಾ ಮಟ್ಟದ ಅಧಿಕಾರಿಯವರನ್ನು ಉಸ್ತುವಾರಿಯಾಗಿ ನೇಮಿಸಲಾಗಿರುತ್ತದೆ. ಮಾನವ ಸರಪಳಿಯಲ್ಲಿ ಭಾಗವಹಿಸುವವರ ಆರೋಗ್ಯ ದೃಷ್ಟಿಯಿಂದ ಪ್ರತಿ 100 ಮೀಟರ್ಗೆಗೆ ಒಬ್ಬ ಆಶಾ ಕಾರ್ಯಕರ್ತೆ ಹಾಗೂ 500 ಮೀಟರ್ ಅಂತರಕ್ಕೆ ಒಬ್ಬ ಆರೋಗ್ಯ ಅಧಿಕಾರಿಯನ್ನು ನಿಯೋಜಿಸಲು ಕ್ರಮ ವಹಿಸಲಾಗಿದೆ. ಎಲ್ಲಾ ಧಾರ್ಮಿಕ ಸಂಸ್ಥೆಗಳು, ಲಯನ್ಸ್ ಸಂಸ್ಥೆ, ರೋಟರಿ ಸಂಸ್ಥೆ, ವರ್ತಕರು ಮತ್ತು ಗ್ರಾಮಾಂತರ ಪ್ರದೇಶಗಳಿಂದ ಮಕ್ಕಳನ್ನು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಕರೆತರಲು ಖಾಸಗಿ ಶಾಲಾ ವಾಹನಗಳನ್ನು ಪಡೆಯಲು ಕ್ರಮವಹಿಸಲಾಗಿದೆ.
ಮಾನವ ಸರಪಳಿ ಕಾರ್ಯಕ್ರಮದಲ್ಲಿ ಎಲ್ಲಾ ಸಾರ್ವಜನಿಕರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು. ರೋಟರಿ ಇಂಟರ್‌ನ್ಯಾಷನಲ್, ಸಿವಿಲ್ ಸೊಸೈಟಿ, ಎನ್‌ಜಿಓ, ವಕೀಲರ ಸಂಘದವರು, ಶಿಕ್ಷಕರು, ವಿದ್ಯಾರ್ಥಿಗಳು, ಮಹಿಳಾ ಸಂಘಟನೆಗಳು, ಪತ್ರಿಕಾ ಮತ್ತು ಸುದ್ದಿ ಮಾಧ್ಯಮದವರು, ರಾಜಕೀಯ ಪಕ್ಷದ ಮುಖಂಡರುಗಳು, ಎಲ್ಲಾ ಸಮುದಾಯದ ಯಜಮಾನರು ಮತ್ತು ಮುಖಂಡರುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ವರದಿ ಆರ್ ಉಮೇಶ್ ಮಲಾರಪಾಳ್ಯ