ಹುತಾತ್ಮರಿಗೆ ಗೌರವ ಸಲ್ಲಿಕೆ ನಮ್ಮೆಲ್ಲರ ಆದ್ಯ ಕರ್ತವ್ಯ ಜಿಲ್ಲಾ ನ್ಯಾಯಾಧೀಶರಾದ ಭಾರತಿ

ಚಾಮರಾಜನಗರ:ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಯ ಸೇವಾ ಅವಧಿಯಲ್ಲಿ ಹುತಾತ್ಮರಾದ ಅಧಿಕಾರಿ, ಸಿಬ್ಬಂದಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ್ಷರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.

ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಅವರಣದಲ್ಲಿಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ಸ್ಮರಣಾ ದಿನದ ಅಂಗವಾಗಿ ಚಾಮರಾಜನಗರ ಪ್ರಾದೇಶಿಕ ವೃತ್ತ ಹಾಗೂ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಚ ಅರ್ಪಿಸಿ, ಗೌರವ ಸಲ್ಲಿಸಿ ಅವರು ಮಾತನಾಡಿದರು.

ಕಾಡಿದ್ದರೆ ಮಳೆ, ಮಳೆ ಇದ್ದರೆ ಬೆಳೆ ನಾಡ್ನುಡಿಯಂತೆ ನಾಡಿನಾದ್ಯಂತ ಸಮೃದ್ಧ ಅರಣ್ಯ ಪ್ರದೇಶವಿದ್ದರೆ ನಾವೆಲ್ಲರೂ ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಲಿದೆ. ಅರಣ್ಯ ಸಂರಕ್ಷಣೆ ಕಾರ್ಯದಲ್ಲಿ ಹುಲಿದಾಳಿ, ಆನೆ ತುಳಿತವನ್ನು ಲೆಕ್ಕಿಸದೇ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಹುತಾತ್ಮರಾದವರಿಗೆ ಪ್ರತಿಯೊಬ್ಬರು ಗೌರವ ಸಲ್ಲಿಸಬೇಕು. ಅವರ ಕರ್ತವ್ಯ ಶ್ರದ್ಧೆಯನ್ನು ಸ್ಮರಿಸಬೇಕು ಎಂದು ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.

ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕರಾದ ಬಿ.ಎಸ್. ಶ್ರೀಪತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಕಾರ್ಯದಲ್ಲಿ ತ್ಯಾಗ, ಬಲಿದಾನಗೈದವರನ್ನು ಸ್ಮರಿಸುವ ಸಲುವಾಗಿ ಅರಣ್ಯ ಹುತಾತ್ಮರ ದಿನಾಚರಣೆಯನ್ನು ರಾಷ್ಟ್ರಾದ್ಯಂತ ಆಚರಿಸಲಾಗುತ್ತಿದೆ. ವೀರಪ್ಪನ್‍ನಿಂದ ಹತರಾದ ಐ.ಎಫ್.ಎಸ್. ಅಧಿಕಾರಿ ಡಾ. ಪಿ. ಶ್ರೀನಿವಾಸ್ ಅವರ ಸ್ಮರಾಣಾರ್ಥ ಕರ್ನಾಟಕದಲ್ಲಿ ನವೆಂಬರ್ 10ರಂದು ಹುತಾತ್ಮರ ದಿನ ಆಚರಿಸಲಾಗುತಿತ್ತು. ಜೋಧ್‍ಪುರದ ರಾಜ ಬಿಷ್ಣೋಯಿ ಸಮುದಾಯದ ಜನರಿಗೆ ಕಾಡಿನಲ್ಲಿ ಮರಗಳನ್ನು ಕಡಿಯುವಂತೆ ಆದೇಶಿಸಿದ್ದರೂ ಪರಿಸರ ಪ್ರೇಮಿಗಳಾಗಿದ್ದ ಜನರು ಆದೇಶವನ್ನು ತಿರಸ್ಕರಿಸಿದ್ದರು. ಇದರಿಂದ ಕುಪಿತನಾದ ರಾಜ ಬಿಷ್ಣೋಯಿ ಸಮುದಾಯದ 363 ಜನರನ್ನು ಹತ್ಯೆಗೈದ ಹಿನ್ನೆಲೆ ಸೆಪ್ಟೆಂಬರ್ 11ರ ದಿನವನ್ನು ಹುತಾತ್ಮರ ದಿನವನ್ನಾಗಿ ಆಚರಿಸುವಂತೆ ಭಾರತ ಸರ್ಕಾರದ ಪರಿಸರ ಇಲಾಖೆಯು ನಿರ್ದೇಶನ ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪ್ರಭಾರ ಜಿಲ್ಲಾಧಿಕಾರಿಗಳಾದ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ ಕವಿತಾ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಸಭ್ಯಶ್ರೀ, ವನ್ಯಜೀವಿ ಮಂಡಳಿಯ ಮಲ್ಲೇಶಪ್ಪ, ಇತರೆ ಅರಣ್ಯ ಅಧಿಕಾರಿಗಳು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಚವಿರಿಸಿ ಗೌರವ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಅರಣ್ಯ ರಕ್ಷಕರು ಆಕರ್ಷಕ ಪಥಸಂಚಲನ ನಡೆಸಿ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು. ಹುತಾತ್ಮರ ಗೌರವಾರ್ಥ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ರಾಷ್ಟ್ರಗೀತೆ ನುಡಿಸಲಾಯಿತು. ಎರಡು ನಿಮಿಷಗಳ ಮೌನಾಚರಣೆ ಮಾಡಲಾಯಿತು.

ವರದಿ ಆರ್ ಉಮೇಶ್ ಮಲಾರಪಾಳ್ಯ