ಮನೆ ಮುಂದೆ ಕಟ್ಟಿಹಾಕಿದ್ದ ರೈತ ನ ಹಸುಗಳು ಕಳ್ಳತನ

ದೊಡ್ಡಬಳ್ಳಾಪುರ.., ತಾಲೂಕಿನಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಮೇಕೆಗಳು ಹಾಗೂ ಹಸುಗಳ ಕಳ್ಳತನದ ಪ್ರಕರಣಗಳು ನಡೆದಿದ್ದು, ಪೊಲೀಸ್ ಇಲಾಖೆಯ ಪರಿಶ್ರಮದಿಂದ ಜಾನುವಾರುಗಳ ಕಳ್ಳರು ಪತ್ತೆಯಾಗಿರುವ ಪ್ರಸಂಗ ಮಾಸುವ ಮುನ್ನವೇ ದೊಡ್ಡಬಳ್ಳಾಪುರ ನಗರದಲ್ಲಿ ಹಸುಗಳ ಕಳ್ಳತನ ನಡೆದಿದೆ. ಕಳೆದ ಸೋಮವಾರ ತಡರಾತ್ರಿ ದೇವರಾಜ ನಗರದ ಪದ್ಮಶಾಲಿ ಕಲ್ಯಾಣ ಮಂದಿರದ ಸಮೀಪ ವಾಸವಾಗಿರುವ ರೈತ ಬಂಡೆ ಮಲ್ಲಿಕಾರ್ಜುನ ಎಂಬುವರ ಮನೆಯ ಮುಂಭಾಗ ಕಟ್ಟಿಹಾಕಿದ್ದ ಹಸುಗಳು ಕಳ್ಳತನವಾಗಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ಎಲ್ಲಾ ಕಡೆ ಹುಡುಕಿ ಪ್ರಯೋಜನವಾಗದೆ ರೈತ ಮಲ್ಲಿಕಾರ್ಜುನ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸುಮಾರು ನಾಲ್ಕು ಹಸುಗಳು ಕಳುವಾಗಿವೆ ಎಂದು ಹೇಳಲಾಗುತ್ತಿದೆ. ಹೈನುಗಾರಿಕೆಯಿಂದ ಜೀವನ ನಡೆಸುತ್ತಿರುವ ಮಲ್ಲಿಕಾರ್ಜುನ್ ಕುಟುಂಬಕ್ಕೆ ಲಕ್ಷಾಂತರ ಬೆಲೆಯ ಜಾನುವಾರುಗಳು ಕಳುವಾಗಿರುವುದು ಚಿಂತೆಗೆ ಈಡಾಗುವಂತೆ ಮಾಡಿದೆ