ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಚಾಲನೆ
ಚಾಮರಾಜನಗರ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಕ್ರೀಡಾ ಧ್ವಜಾರೋಹಣ ನೆರೆವೇರಿಸಿದರು.
ಬಳಿಕ ಮೈದಾನದಲ್ಲಿ ಗುಂಡು ಎಸೆಯುವ ಮೂಲಕ ಜಿಲ್ಲಾಧಿಕಾರಿಯವರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಿಜೇತರಾಗಿ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಜಿಲ್ಲೆಯ ಐದು ತಾಲೂಕುಗಳ ಕ್ರೀಡಾತಂಡಗಳ ಪರಿಚಯ ಮಾಡಿಕೊಂಡರು. ಕ್ರೀಡಾಪಟುಗಳೊಂದಿಗೆ ಆತ್ಮೀಯವಾಗಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ವಿದ್ಯಾರ್ಥಿಗಳಲ್ಲಿ ಹುರುಪು, ಉತ್ಸಾಹ ಇಮ್ಮಡಿಗೊಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಕ್ರೀಡಾಜ್ಯೋತಿ ಸ್ವೀಕರಿಸಿ ಕ್ರೀಡಾಪಟುಗಳಲ್ಲಿ ಸ್ಪೂರ್ತಿ ತುಂಬಿದರು.
ಬಳಿಕ ನಡೆದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ ಅವರು ಮಾತನಾಡಿ ವಿದ್ಯಾರ್ಥಿಗಳು ಪಾಠ, ಪ್ರವಚನದ ಜೊತೆಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ, ಮಾನಸಿಕ ಆರೋಗ್ಯ ಉತ್ತಮಗೊಳ್ಳಲಿದೆ. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯವಾಗಿದೆ. ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದರು.
ವಿದ್ಯಾರ್ಥಿಗಳು ಕೂಟದಲ್ಲಿ ಕ್ರೀಡಾ ಮನೋಭಾವ ಮೆರೆಯಬೇಕು. ಜಿಲ್ಲಾಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳು ಮೈಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ ಗೆದ್ದು ಜಿಲ್ಲೆಗೆ ಕೀರ್ತಿ ತರುವಂತಾಗಬೇಕು. ಕ್ರೀಡೆಯಲ್ಲಿ ಸೋತವರು ಹತಾಶರಾಗದೇ ಮತ್ತೊಮ್ಮೆ ಗೆಲುವಿಗೆ ಪ್ರಯತ್ನಿಸಬೇಕು ಎಂದು ಮಹಮ್ಮದ್ ಅಸ್ಗರ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀನಿವಾಸಪ್ರಸಾದ್ ಅವರು ಮಾತನಾಡಿ ಚಾಮರಾಜನಗರ ಜಿಲ್ಲಾ ಕೇಂದ್ರವಾಗಿ 25 ವರ್ಷಗಳೇ ಕಳೆದಿದ್ದರೂ ಜಿಲ್ಲಾ ಕ್ರೀಡಾಂಗಣ ಇನ್ನೂ ಅಭಿವೃದ್ಧಿಯಾಗಬೇಕಿದೆ. ಕ್ರೀಡಾಂಗಣಕ್ಕೆ ಕುಡಿಯುವ ನೀರು ಸೇರಿದಂತೆ ಇತರೆ ಮೂಲಸೌಲಭ್ಯಗಳ ಕೊರತೆ ಇದ್ದು, ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸಲ್ಲಿಸಿರುವ ಪ್ರಸ್ತಾವನೆಗೆ ಅನುಮೋದನೆ ದೊರೆತಿದೆ. ಅಲ್ಲದೇ ಜಿಮ್ ಸ್ಥಾಪನೆ, ಕ್ರೀಡಾ ಇಲಾಖೆ ಕಚೇರಿ ಹಾಗೂ ಕ್ರೀಡಾಂಗಣದ ಪ್ರವೇಶದ್ವಾರದ ಕ್ರೀಯಾಯೋಜನೆಗೆ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಆರಂಭಿಸಬೇಕಾಗಿದೆ ಎಂದರು.
ಸರ್ಕಾರವು ನಿಗದಿಪಡಿಸಿರುವ ಶೇ. 2ರಷ್ಟು ಕ್ರೀಡಾ ಮೀಸಲಾತಿಗೆ ನೆಟ್‍ಬಾಲ್ ಕ್ರೀಡೆಯನ್ನು ಸೇರ್ಪಡೆ ಮಾಡಿರುವುದು ಆರೋಗ್ಯಕರ ಬೆಳವಣಿಗೆಯಾಗಿದ್ದು, ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ನೆಟ್‍ಬಾಲ್ ತರಬೇತಿ ನೀಡಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕು ಎಂದು ಶ್ರೀನಿವಾಸಪ್ರಸಾದ್ ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿವಸ್ವಾಮಿ, ತಾಲೂಕು ದೈಹಿಕ ಪರಿವೀಕ್ಷಕರಾದ ಬಸವರಾಜು, ಗ್ರೇಡ್-2 ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಚಿಕ್ಕಬಸವಯ್ಯ, ಉಪಾಧ್ಯಕ್ಷರಾದ ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ ಶಿವಮಲ್ಲು, ಪದಾಧಿಕಾರಿ ಕುಮಾರಸ್ವಾಮಿ, ಕ್ರೀಡಾ ತರಬೇತುದಾರ ಗಣೇಶ್, ಇತರರು ಕಾರ್ಯಕ್ರಮದಲ್ಲಿ ಇದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ