ಸೇವಾ ಮನೋಭಾವದಿಂದ ಬದಲಾವಣೆ ಸಂಕಲ್ಪ ಸಾಕಾರ

ದೊಡ್ಡಬಳ್ಳಾಪುರ: ಸೇವಾ ಮನೋಭಾವವನ್ನು ಎಲ್ಲ ಹಂತಗಳಲ್ಲಿ ರೂಢಿಸಿಕೊಂಡಾಗ ಮಾತ್ರ ರಾಷ್ಟ್ರೀಯ ಸೇವಾ ಯೋಜನೆಯ ನೈಜ ಉದ್ದೇಶಗಳು ಸಾಕಾರಗೊಳ್ಳುತ್ತವೆ ಎಂದು ಕೊಂಗಾಡಿಯಪ್ಪ ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಪ್ರವೀಣ್‌ ಹೇಳಿದರು.
ತಾಲೂಕಿನ ತಳಗವಾರ ಗ್ರಾಮದಲ್ಲಿ ಶ್ರೀ ದೇವರಾಜ್‌ ಅರಸ್‌ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ತಾಲ್ಲೂಕಿನ ತಳಗವಾರ ಗ್ರಾಮದಲ್ಲಿ ನಡೆದ ಎನ್.ಎಸ್.ಎಸ್. ವಿಶೇಷ ಶಿಬಿರ/ವ್ಯಕ್ತಿತ್ವ ವಿಕಸನ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಐಕ್ಯತೆಯನ್ನು ಪ್ರಧಾನ ಆದ್ಯತೆಯಾಗಿಟ್ಟುಕೊಂಡು, ಜಾತಿ, ಮತ, ಧರ್ಮಗಳನ್ನು ಮೀರಿದ ಮನುಷ್ಯತ್ವದ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸುವುದು ಎಲ್ಲರ ಕರ್ತವ್ಯವಾಗಬೇಕು. ಸೇವೆ ಎಂಬುದು ಕೇವಲ ನೆಪಮಾತ್ರಕ್ಕೆ ಸೀಮಿತವಾಗದೆ ಶ್ರೇಷ್ಠ ಮೌಲ್ಯಗಳನ್ನು ಒಳಗೊಂಡಿರಬೇಕು. ಬದಲಾವಣೆಯನ್ನು ಬಯಸುವವರು ಮೊದಲ ಬದಲಾಗುವ ಸಂಕಲ್ಪ ಮಾಡಬೇಕು. ಆಗ ಮಾತ್ರ ಪರಿಪೂರ್ಣ ಪ್ರಗತಿ ಸಾಧ್ಯವಾಗುತ್ತದೆ ಎಂದರು.
ಆರ್.ಎಲ್.ಜಾಲಪ್ಪ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ನರಸಿಂಹರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಗ್ರಾಮೀಣ ಜನಜೀವನದ ಒಳಹುಗಳನ್ನು ಅರಿತು, ಸುಧಾರಣೆಯ ಮಹತ್ವವನ್ನು ತಿಳಿದುಕೊಳ್ಳಬೇಕು. ಸಾಮಾಜಿಕ ಬದಲಾವಣೆಯಿಂದ ಮಾತ್ರ ಪ್ರಗತಿಯ ವೇಗ ಹೆಚ್ಚುತ್ತದೆ. ಧನಾತ್ಮಕ ಆಲೋಚನೆಗಳು ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದರು.
ಐಕ್ಯೂಎಸಿ ಸಂಯೋಜಕ ಪ್ರೊ.ಕೆ.ಆರ್.ರವಿಕಿರಣ್, ಕನ್ನಡ ವಿಭಾಗ ಮುಖ್ಯಸ್ಥ ಡಾ.ಎಂ.ಚಿಕ್ಕಣ್ಣ, ನಿರ್ವಹಣಾ ವಿಭಾಗ ಮುಖ್ಯಸ್ಥೆ ಪಿ.ಚೈತ್ರ, ಉದ್ಯೋಗಾಧಿಕಾರಿ ಬಾಬುಸಾಬಿ, ಎನ್‌ಎಸ್‌ಎಸ್‌ ಸಹಾಯಕ ಅಧಿಕಾರಿಗಳಾದ ವೆಂಕಟೇಶ್, ಪೂಜಾ, ಉಪನ್ಯಾಸಕರಾದ ಭಾನುಶ್ರೀ, ಮಧುಶ್ರೀ, ರಮ್ಯಶ್ರೀ, ಸಂಧ್ಯಾ, ದೀಪಾ, ನಯನ ಮತ್ತಿತರರು ಉಪನ್ಯಾಸ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

*ಮಧುಮೇಹ ತಪಾಸಣೆ:*
ಇದೇ ವೇಳೆ ಗ್ರಾಮೀಣ ಜನರಿಗಾಗಿ ದೊಡ್ಡಬಳ್ಳಾಪುರದ ಲಯನ್ಸ್‌ ಕ್ಲಬ್‌ ಆಫ್‌ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌, ಲಯನ್ಸ್‌ ಕ್ಲಬ್‌ ಆಫ್ ಆರ್ಯಭಟ ಸಹಯೋಗದಲ್ಲಿ ಮಧುಮೇಹ, ರಕ್ತದೊತ್ತಡ ತಪಾಸಣೆ ಶಿಬಿರ ನಡೆಯಿತು. 100ಕ್ಕೂ ಹೆಚ್ಚು ಜನರಿಗೆ ತಪಾಸಣೆ ನಡೆಸಿ ವೈದ್ಯಕೀಯ ಸಲಹೆ ನೀಡಲಾಯಿತು.