ನೇಕಾರ ಹೋರಾಟ ಸಮಿತಿಯ ಜನಪರ ಕಾರ್ಯ ಶ್ಲಾಘನೀಯ– ಮಾಜಿ ಶಾಸಕ ವೆಂಕಟರಮಣಯ್ಯ

ದೊಡ್ಡಬಳ್ಳಾಪುರ:ಸತತ 24 ವರ್ಷಗಳ ಕಾಲ ಹೋರಾಟ ಮಾಡಿ ನೇಕಾರರ ಸಂಕಷ್ಟಗಳನ್ನು ಸರ್ಕಾರಗಳ ಗಮನಕ್ಕೆ ತಂದು ಪರಿಹಾರ ಕೊಡಿಸುವಲ್ಲಿ ನಿರತರಾಗಿರುವ ನೇಕಾರ ಹೋರಾಟ ಸಮಿತಿಯ ಕಾರ್ಯ ಶ್ಲಾಘನೀಯ.ಅದರಲ್ಲೂ ಸತತ 44 ದಿನಗಳ ಕಾಲ ನೇತ್ರ ತಪಾಸಣೆ ಕಷ್ಟ ಸಾದ್ಯ .ಅದನ್ನು ನೇಕಾರ ಹೋರಾಟ ಸಮಿತಿಯವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಮಾಜಿ ಶಾಸಕ ಅಪ್ಪಕಾರನಹಳ್ಳಿ ವೆಂಕಟರಮಣಯ್ಯ ರವರು ಹೇಳಿದರು.

ನೇಕಾರ ಹೋರಾಟ ಸಮಿತಿ ಹಾಗೂ ನವೋದಯ ನೇಕಾರರ ಉತ್ಪಾದನೆ ಮತ್ತು ಮಾರಾಟ ಸಹಕಾರ ಸಂಘದವತಿಯಿಂದ ಗಾಂಧಿ ಜಯಂತಿಯಂದು ನೇತ್ರ ತಪಾಸಣಾ ಶಿಬಿರ ಪ್ರಾರಂಭವಾಗಿ ಇಂದು ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದ್ದು ಮಾಜಿ ಶಾಸಕ ವೆಂಕಟರಮಣಯ್ಯ ರವರು ಭಾಗವಹಿಸಿ ಮಾತನಾಡಿ,50 ವರ್ಷ ವಯಸ್ಸಾದ ನಂತರ ದೇಹದ ಆರೋಗ್ಯದ ಬಗ್ಗೆ ಸಾರ್ವಜನಿಕರು ಕಾಳಜಿವಹಿಸಬೇಕು.ಕೆಲವು ಆಸ್ಪತ್ರೆ ಗಳಲ್ಲಿ ಸಂಘಟನೆಗಳ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಇರುತ್ತದೆ. ಅದನ್ನು ಬಡವರು ಹಾಗು ಅಶಕ್ತರು ಸದುಪಯೋಗ ಪಡಿಸಿಕೊಳ್ಳಬೇಕು.ನಮ್ಮ ಅವದಿಯಲ್ಲಿ ನೇಕಾರರಿಗೆ ಸಾಕಷ್ಟು ಕೆಲಸಗಳಾಗಿವೆ ಪ್ರಸ್ತುತ ನಮ್ಮ ಸರ್ಕಾರ ನೇಕಾರರಿಗಾಗಿ ರಿಯಾಯಿತಿ ದರದಲ್ಲಿ ವಿದ್ಯುತ್ ನೀಡಿರುವುದು ಸೇರಿದಂತೆ ಹಲವಾರು ನೇಕಾರ ಕಲ್ಯಾಣ ಕಾರ್ಯಕ್ರಮಗಳನ್ನು ನೀಡಿದೆ.ಪಡಿತರ ಚೀಟಿ ರದ್ದತಿ ಬಗ್ಗೆ ಕೆಲವೊಂದು ನಿಯಮಗಳಿವೆ. ಅದರಂತೆ ಸರ್ಕಾರ ಕ್ರಮ ಕೈಗೊಂಡಿದೆ.ತಾಲೂಕಿನಲ್ಲಿ ಕೆಲ ಕಡು ಬಡವರ ಪಡಿತರ ಚೀಟಿ ರದ್ದಾಗಿರುವುದು ನಮ್ಮ ಗಮನಕ್ಕೆ ಬಂದಿದೆ ಅದನ್ನು ಕೂಡಲೆ ಪರಿಹರಿಸಲು ಪ್ರಯತ್ನಿಸಲಾಗುವುದು.ನೇಕಾರ ಹೋರಾಟ ಸಮಿತಿ ಬರೀ ಹೋರಾಟಕ್ಕೆ ಸೀಮಿತವಾಗದೆ ರಕ್ತದಾನ ಶಿಬಿರ,ಉಚಿತ ನೇತ್ರ ತಪಾಸಣೆ ಹಾಗು ಹಲವಾರು ಮಂದಿಗೆ ಉಚಿತ ಕನ್ನಡಕ ವಿತರಣೆಯಂತ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದು ಗಮನಾರ್ಹ ಸಂಗತಿ.ಇದಕ್ಕೆ ನಮ್ಮ ಸಹಕಾರ ನಿರಂತರವಾಗಿರುತ್ತದೆ ಎಂದು ವೆಂಕಟರಮಣಯ್ಯ ತಿಳಿಸಿದರು.

ಮಾಜಿ ನಗರಸಭಾ ಅದ್ಯಕ್ಷ ತ.ನ.ಪ್ರಭುದೇವ ಮಾತನಾಡಿ ನಿರಂತರ 24 ವರ್ಷಗಳ ಹೋರಾಟ ಗಳ ಮೂಲಕ ನೇಕಾರ ಹೋರಾಟ ಸಮಿತಿ ನೇಕಾರರ ಸಂಕಷ್ಟಕ್ಕೆ ಸ್ಪಂದಿಸಿದೆ.ನೇಯ್ಗೆ ಉದ್ಯಮದಲ್ಲಿ ದೊಡ್ಡಬಳ್ಳಾಪುರ ದೇಶದಲ್ಲೇ ಪ್ರಖ್ಯಾತಿಯಾಗಿದೆ ಇಲ್ಲಿನ ನೇಕಾರ ರು ವೈವಿಧ್ಯಮಯ ವಿಶಿಷ್ಟ ರೀತಿಯ ಸೀರೆಗಳನ್ನು ನೇಯ್ದರು ದೊಡ್ಡಬಳ್ಳಾಪುರ ಬ್ರಾಂಡ್ ಮಾಡಲಾಗುತ್ತಿಲ್ಲ.ಮುಂದಿನ ದಿನಗಳಲ್ಲಿ ಇದರ ಬಗ್ಗೆ ಗಮನ ಹರಿಸಬೇಕಿದೆ‌‌.ಜಗತ್ತಿಗೆ ವಸ್ತ್ರಗಳನ್ನು ನೇಯ್ದು ಕೊಟ್ಟ ನೇಕಾರರ ಬದುಕು ದುಸ್ತರದಲ್ಲಿದೆ.ಇದಕ್ಕೆ ಸರ್ಕಾರಗಳು ಇನ್ನಷ್ಟು ಉತ್ತೇಜನ ಕೊಡಬೇಕು.ಈಗಾಗಲೇ ತಾಲೂಕಿನ ಮೂರು ಕಡೆ ಕೈಗಾರಿಕಾ ವಸಾಹತುಗಳು ಹುಟ್ಟಿಕೊಂಡು ನೇಯ್ಗೆ ಕಾರ್ಮಿಕರು ಸಿಗುತ್ತಿಲ್ಲ,ಹಾಗಾಗಿ ವಲಸಿಗರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಬಂದಿದೆ.ಈಗಾಗಲೆ ನಗರಸಭೆ ವತಿಯಿಂದ ನೇಕಾರ ಭವನಕ್ಕೆ ಜಿ.ಕೆ.ವ್ಯಾಲಿ ಬಡಾವಣೆಯ ಲ್ಲಿ ನಿವೇಶನ ಗುರ್ತಿಸಿದೆ.ಜೊತೆಗೆ ಭವನ ನಿರ್ಮಾಣಕ್ಕೆ ಹತ್ತು (10) ಲಕ್ಷ ಅನುದಾನವನ್ನು ನೀಡಲು ನಗರಸಭೆ ಸಿದ್ದವಿದೆ ಅದನ್ನು ನೇಕಾರ ಮುಖಂಡರು ಸರ್ಕಾರದ ಜೊತೆ ವ್ಯವಹರಿಸಿ ಮಂಜೂರಿಗೆ ಪ್ರಯತ್ನಿಸಬೇಕಿದೆ.ನೇಕಾರ ಹೋರಾಟ ಸಮಿತಿಯ ಹೇಮಂತ್ ರಾಜು ಮತ್ತವರ ತಂಡದ ಜನಪರ ಕಾರ್ಯ ಶ್ಲಾಘನೀಯ ಎಂದು ಪ್ರಭುದೇವ್ ಹೇಳಿದರು.

ನೇಕಾರ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಜಿ.ಹೇಮಂತರಾಜು ಮಾತನಾಡಿ ನಮ್ಮ ಹೋರಾಟ ಸಮಿತಿ ಪ್ರಾರಂಭವಾಗಿ 25ನೇ ವರ್ಷದತ್ತ ಸಾಗುತ್ತಿದೆ.ಸಮಿತಿಯ ನಿರಂತರ ಹೋರಾಟಗಳಲ್ಲಿ ಸರ್ಕಾರಗಳ ಗಮನ ಸೆಳೆದು ನೇಕಾರರ ಸಂಕಷ್ಟಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿ ಅದರಲ್ಲಿ ಯಶಸ್ವಿಯಾಗಿದೆ.ಅದರಲ್ಲೂ ಇತ್ತೀಚಿನ ದಿನಗಳಲ್ಲಿ ನೇಕಾರರ ಹಲವು ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿದೆ.ಇದಕ್ಕೆ ಮಾಜಿ ಶಾಸಕರಾದ ವೆಂಕಟರಮಣಯ್ಯ ರವರ ಸಹಕಾರ ಅತೀ ಮುಖ್ಯ ಕಾರಣ.ಅದಕ್ಕಾಗಿ ವೆಂಕಟರಮಣಯ್ಯ ರವರನ್ನು ಸಮಿತಿ ಅಭಿನಂದಿಸುತ್ತದೆ.ನೇಕಾರ ಹೋರಾಟ ಸಮಿತಿ ಆಶ್ರಯದಲ್ಲಿ ಸುಮಾರು 44 ದಿನಗಳ ಕಾಲ ಉಚಿತ ನೇತ್ರ ತಪಾಸಣೆಯನ್ನು ನಡೆಸಿ ಇಂದು ನೂರಾರು ಮಂದಿಗೆ ಉಚಿತ ಕನ್ನಡಕ ವಿತರಣೆ ಮಾಡುತ್ತಿದ್ದೇವೆ.ಹಲವಾರು ಅಶಕ್ತ ಸಾರ್ವಜನಿಕರು ಇದರ ಪ್ರಯೋಜನ ವನ್ನು ಪಡೆದಿದ್ದಾರೆಂಬುದು ಹೆಮ್ಮೆಯ ವಿಷಯ. ಸಮಿತಿ ಜನಪರ ಕಾರ್ಯಗಳಲ್ಲಿ ನಗರದ ನೇಕಾರ ಬಂಧುಗಳ ಸಹಕಾರದಿಂದ ತೊಡಗಿಸಿಕೊಳ್ಳುವ ಮೂಲಕ ನೇಕಾರರ ಜೊತೆ ಸಾರ್ವಜನಿಕರ ಪರವಾಗಿ ಕೆಲಸ ಮಾಡುತ್ತದೆ ಎಂದು ಹೇಮಂತ್ ರಾಜ್ ಹೇಳಿದರು.

ಸಮಾರೋಪ ಸಮಾರಂಭದಲ್ಲಿ ನೇತ್ರ ತಪಾಸಣೆಗೊಳಗಾದ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣೆ ನಡೆಯಿತು.ಕಾರ್ಯಕ್ರಮ ದಲ್ಲಿ ಲಯನ್ಸ್ ಜಿಲ್ಲಾ ಸಂಯೋಜಕ ವಿಜಯ್ ಕುಮಾರ್,ಲಯನ್ಸ್ ಕ್ಲಬ್ ಅದ್ಯಕ್ಷೆ ಮಂಗಳ ಗೌರಿ ಪರ್ವತಯ್ಯ,ವಿಷನ್ ಸ್ಟ್ರಿಂಗ್ ಸಂಸ್ಥೆಯ ಪ್ರಸನ್ನ ಕುಮಾರ್,ಜಿಲ್ಲಾ ಮಹಿಳಾ ಕಾಂಗ್ರೆಸ್‌ ನ ಅಧ್ಯಕ್ಷೆ ರೇವತಿ ಅನಂತರಾಮ್,ನಗರಸಭಾ ಸದಸ್ಯರಾದ ಅಲ್ತಾಫ್,ನಾಗರಾಜ್,ಆನಂದ್,ಆಂದ್ರ ದೇವಾಂಗ ಸಂಘದ ನಿರ್ದೇಶಕರಾದ ನೆಲ್ಲೂರ್ ಸುಬ್ರಹ್ಮಣ್ಯನ್ ದೇವಲೋಕಂ ಜಗದೀಶ್, ಬಂಡ ಮಂಜುನಾಥ್, ಕೆ ಜಿ ಗೋಪಾಲ್, ಜೆ ಎಸ್ ಮಂಜುನಾಥ್ ಸೇರಿದಂತೆ ಸಮಿತಿಯ ಪದಾದಿಕಾರಿಗಳು ಪಾಲ್ಗೊಂಡಿದ್ದರು.