ವಿಜೃಂಭಣೆಯಿಂದ ನೆರವೇರಿದ ರಂಗಪ್ಪನ ಸಂಕ್ರಾಂತಿ ತೇರು..
ಯಳಂದೂರು. ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬಿಳಿಗಿರಿರಂಗನ ಬೆಟ್ಟದಲ್ಲಿ ಬಿಳಿಗಿರಿರಂಗನಾಥ ಸ್ವಾಮಿ ಸಂಕ್ರಾಂತಿ ರಥೋತ್ಸವ ಚಿಕ್ಕ ಜಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವದ ಹಿನ್ನೆಲೆಯಲ್ಲಿ ವಿವಿಧ ಬಗೆಯ ಹೂಗಳಿಂದ ತೇರನ್ನು ಸಿಂಗರಿಸಲಾಗಿತ್ತು, ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರು ಗೋವಿಂದ ಗೋವಿಂದ ಎಂಬ ಜಯ ಘೋಷಣೆಯೊಂದಿಗೆ ತೇರನ್ನು ಎಳೆದರು, ಮಹಾ ರಥೋತ್ಸವದಲ್ಲಿ ಪ್ರಮುಖವಾಗಿ ಶಂಖ ಜಾಗಟೆಯ ನಾದ ಮೊಳಗಿದವು. ಸಾವಿರಾರು ಭಕ್ತರು ಮನೆ ಗೋಡೆಗಳ ಮೇಲೆ ಕುಳಿತು ರಥೋತ್ಸವ ವೀಕ್ಷಣೆ ಮಾಡಿದರು. ಬೆಳಗ್ಗೆ 11: 55 ರಲ್ಲಿ ರಥೋತ್ಸವ ಜರುಗಿತು
11.53ಕ್ಕೆ ತೇರಿನ ಮೇಲೆ ಬಾನಂಗಳದಲ್ಲಿ ಗರುಡ ಹಾರಾಡಿತು, ನಂತರ 12:25ಕ್ಕೆ ತೇರನ್ನು ಎಳೆಯಲಾಯಿತು, ದೇವಸ್ಥಾನಕ್ಕೆ ಸುತ್ತು ಹಾಕಿದ ತೇರು ಬಳಿಕ ಸ್ವ ಸ್ಥಾನದಲ್ಲಿ ಬಂದು ಸೇರಿತ್ತು, ರಥೋತ್ಸವಕ್ಕೆ ಆಗಮಿಸಿದ ನವ ಜೋಡಿಗಳು ಹಣ್ಣು ಜವನ ಎಸೆದರು, ಹಾಗೂ ಭಕ್ತರು ತೇರಿಗೆ ಹಣ್ಣುಗಳನ್ನು ಎಸೆದು ಹರಕೆ ತೀರಿಸಿದರು, ಅಲ್ಲದೆ ಹೊಸ ವರ್ಷದ ಮೊದಲ ರಥೋತ್ಸವ ಹಿನ್ನೆಲೆಯಲ್ಲಿ ಈ ಭಾಗದ ರೈತರು ತಾವು ಬೆಳೆದ ದವಸ ಧಾನ್ಯಗಳಾದ ರಾಗಿ, ಬತ್ತ, ಜೋಳ, ಹಲಸಂದೆ,ತೊಗರಿ, ನವನೆಗಳನ್ನು ತೇರಿಗೆ ಎಸೆದು ದೇವರಿಗೆ ಸಮರ್ಪಿಸಿದರು. ಆ ಮೂಲಕ ಮುಂದಿನ ಇಳುವರಿ ವೃದ್ಧಿಸುವಂತೆ ದೇವರಲ್ಲಿ ಮೊರೆ ಇಟ್ಟರು,
ಬಿಳಿಗಿರಿರಂಗನಾಥ ಸ್ವಾಮಿ ದೇವರನ್ನು ಬೆಳ್ಳಿ ಕಿರೀಟ ಸೇರಿದಂತೆ ವಿವಿಧ ಚಿನ್ನಾಭರಣಗಳಿಂದ ಅಲಂಕಾರ ಮಾಡಲಾಗಿತ್ತು. ನಂತರ ಭಕ್ತರು ಇಲ್ಲಿರುವ ದೇವರ ದೊಡ್ಡ ಪಾದುಕೆ ಗಳಿಂದ ತಲೆಗೆ ಹೊಡೆಸಿಕೊಳ್ಳುವ ಮೂಲಕ ಭಕ್ತಿ ಮೆರೆದರು.
ಬಿಳಿಗಿರಿರಂಗನ ಬೆಟ್ಟ ಸೇರಿದಂತೆ ಸುತ್ತಮುತ್ತಲಿನ ಅರಣ್ಯದ ಪೋಡುಗಳಲ್ಲಿ ವಾಸಿಸುವ ಸಾವಿರಾರು ಸೋಲಿಗರು ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡರು. ಸೋಲಿಗರೇ ಈ ತೇರು ಕಟ್ಟುವುದು ಇಲ್ಲಿನ ವಿಶೇಷ, ಬಿಳಿಗಿರಿ ರಂಗನಾಥ ಸ್ವಾಮಿ ಸೋಲಿಗರ ಕುಸುಮಾಲೆಯನ್ನು ವರಿಸಿದ್ದ ಹಿನ್ನೆಲೆಯಲ್ಲಿ ಸೋಲಿಗರು ರಂಗಭಾವ ಎಂದು ರಂಗಪ್ಪನನ್ನು ಕರೆಯುತ್ತಾರೆ.
*ಬ್ಯಾಟೆ ಮನೆ ಸೇವೆ..*
ಬಿಳಿಗಿರಿರಂಗನಾಥ ಸ್ವಾಮಿ ದೇಗುಲದಲ್ಲಿ ಪ್ರತಿ ವರ್ಷ ಎರಡು ಬಾರಿ ರಥೋತ್ಸವ ನಡೆಯುತ್ತದೆ, ಸಂಕ್ರಾಂತಿ ಹಬ್ಬದ ಮಾರನೇ ದಿನ ಚಿಕ್ಕ ಜಾತ್ರೆ ನಡೆದರೆ, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ, ಈ ವೇಳೆಯಲ್ಲಿ ರಂಗಪ್ಪನ ಒಕ್ಕಲಿನ ದಾಸರು ಅಕ್ಕಿ,ಕಜ್ಜಾಯ,ಬೆಲ್ಲ, ಎಳ್ಳು ತೆಂಗಿನಕಾಯಿ, ಕಡ್ಲೆಯನ್ನು ಹಾಕಿ ಬ್ಯಾಟೆ ಮನೆ ಸೇವೆ ಹಾಕುವ ಸಂಪ್ರದಾಯವಿದೆ, ದೇಗುಲದ ಸುತ್ತ ಜಾಗಟೆ ಶಂಖನಾದ ಹೊಮ್ಮಿಸಿ ಹಾಪರಾಕ್, ಭೋಪರಾಕ್ ಎಂದು ಕೂಗಿ ವಿಶಿಷ್ಟವಾಗಿ ಆಚರಿಸಿದರು.
ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನವನ್ನು ಪಡೆದರು ಅಲ್ಲದೆ ರಥೋತ್ಸವ ನೆಡೆಯುವ ಸಂದರ್ಭದಲ್ಲಿ ಭಕ್ತರಿಗೆ ನೀರು ಮಜ್ಜಿಗೆ ಪಾನಕ ಪುಳಿಯೋಗರೆಯನ್ನು ವಿತರಿಸಲಾಯಿತು.
*ಮೋಹನ್ ಕುಮಾರ್ ಕಾರ್ಯನಿರ್ವಾಹಕ ಅಧಿಕಾರಿ ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ..*
ಈ ಬಾರಿಯ ಚಿಕ್ಕ ಜಾತ್ರೆ ಹಾಗೂ ರಂಗಪ್ಪನ ತೆರಿಗೆ ಬಂದಂತಹ ಎಲ್ಲಾ ಭಕ್ತರಿಗೂ ಮೂಲಸೌಕರ್ಯಗಳನ್ನು ಒದಗಿಸಲಾಗಿತ್ತು ಕುಡಿಯುವ ನೀರು ತಾತ್ಕಾಲಿಕ ಶೌಚಾಲಯ ಪ್ರಸಾದ ವಿನಿಯೋಗ ಸೇರಿದಂತೆ ಭಕ್ತರಿಗೆ ಅನುಕೂಲವಾಗುವಂತೆ ಉತ್ತಮ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು.
*ದ್ವಿಚಕ್ರ ವಾಹನಕ್ಕೆ ಸ್ಥಗಿತ, ವಾಹನ ದಟ್ಟನೆ ತಡೆಯುವಲ್ಲಿ ಯಶಸ್ವಿಯಾದ ಪೊಲೀಸ್ ಇಲಾಖೆ..*
ಈ ಬಾರಿಯ ಬಿಳಿಗಿರಿರಂಗನಾಥ ಸ್ವಾಮಿ ಚಿಕ್ಕ ಜಾತ್ರೆ ಹಿನ್ನೆಲೆ ಪೊಲೀಸ್ ಇಲಾಖೆ ಹೆಚ್ಚಿನ ಕಾಳಜಿ ವಹಿಸಿತ್ತು, ಬಿಳಿಗಿರಿರಂಗನ ಬೆಟ್ಟಕ್ಕೆ ದ್ವಿಚಕ್ರ ವಾಹನವನ್ನು ನಿಷೇಧಿಸಲಾಗಿತ್ತು, ಗುಂಬಳ್ಳಿ ಚೆಕ್ಪೋಸ್ಟ್ ನಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿತ್ತು ಇಲ್ಲಿಂದ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು, ಹಾಗಾಗಿ ಬೆಟ್ಟದ ಕಮರಿ ಮೇಲಿರುವ ದೇಗುಲದಲ್ಲಿ ವಾಹನದ ದಟ್ಟನೆ ಕಡಿಮೆ ಇತ್ತು ಸಾಲಿನಲ್ಲಿ ಬಸ್ ಹತ್ತಲು ಇಳಿಯಲು ವ್ಯವಸ್ಥೆ ಮಾಡಲಾಗಿತ್ತು ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮಾಡಲಾಗಿತ್ತು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ. ಕವಿತಾ, ಡಿವೈಎಸ್ಪಿ ಧರ್ಮೇಂದ್ರ, ಸರ್ಕಲ್ ಇನ್ಸ್ಪೆಕ್ಟರ್ ಶ್ರೀಕಾಂತ್, ಸಬ್ ಇನ್ಸ್ಪೆಕ್ಟರ್ ಹನುಮಂತ್ ಉಪ್ಪಾರ್, ಸ್ಥಳದಲ್ಲಿ ಮೊಕ್ಕಂ ಹೂಡಿ ಬಿಗಿ ಭದ್ರತೆ ಕೈಗೊಂಡಿದ್ದರು
ವರದಿ ಆರ್ ಉಮೇಶ್ ಮಲಾರಪಾಳ್ಯ