ಒಳಮೀಸಲಾತಿ ಗಣತಿಯಲ್ಲಿ ಪರಿಶಿಷ್ಟಜಾತಿಯ ಬಲಗೈ ಸಂಬಂದಿತ ಉಪ-ಜಾತಿಗಳನ್ನು “ಛಲವಾದಿ” ಹೊಲೆಯ ಎಂದು ನಮೂದಿಸಬೇಕು– ಸೊಣ್ಣಪ್ಪನ ಹಳ್ಳಿ ರಮೇಶ್

ದೊಡ್ಡಬಳ್ಳಾಪುರ:ಒಳಮೀಸಲಾತಿ ಗಣತಿಯಲ್ಲಿ ಪರಿಶಿಷ್ಟಜಾತಿಯ ಬಲಗೈ ಸಂಬಂದಿತ ಉಪ-ಜಾತಿಗಳನ್ನು “ಛಲವಾದಿ” ಹೊಲೆಯ ಎಂದು ನಮೂದಿಸುವ ಮೂಲಕ ರಾಜಕೀಯವಾಗಿ,ಆರ್ಥಿಕವಾಗಿ , ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ನಮ್ಮ ನಮ್ಮ ಹಕ್ಕನ್ನು ಪಡೆಯಲು ಸಹಕರಿಸಬೇಕೆಂದು ಸೋಣ್ಣಪ್ಪನ ಹಳ್ಳಿ ರಮೇಶ್ ಮನವಿ ಮಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ಸಮುದಾಯಗಳ ನೈಜ ಸ್ಥಾನ, ಅಭಿವೃದ್ಧಿ ತಿಳಿಯಲು ನಾಗಮೋಹನ್ ದಾಸ್ ಆಯೋಗದ ಮುಖೇನ ಸಮೀಕ್ಷೆಗೆ ಮುಂದಾಗಿದ್ದು, ಮನೆ ಬಾಗಿಲಿಗೆ ಬರುವ ಶಿಕ್ಷಕರ ಬಳಿ ಮೂಲ ಜಾತಿಯನ್ನು ಹೊಲಯ / ಛಲವಾದಿ ಎಂದು ಸ್ಪಷ್ಟವಾಗಿ ನಮೂದಿಸುವ ಮೂಲಕ ಸಮುದಾಯದ ಬಂಧುಗಳು ಸಹಕರಿಸಬೇಕು ಎಂದರು.

ಮುಖಂಡರಾದ ಗೂಳ್ಯ ಹನುಮಣ್ಣ ಮಾತನಾಡಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು 2024ರ ಆಗಸ್ಟ್ 1 ರಲ್ಲಿ ಆಯಾ ರಾಜ್ಯಗಳಿಗೆ ದತ್ತಾಂಶದ ಮಾನದಂಡದ ಆಧಾರದ ಮೇಲೆ ಒಳಮೀಸಲು ಜಾರಿ ಮಾಡುವ ಅಧಿಕಾರವನ್ನು ನೀಡಿದ್ದು, ಈ ಹಿನ್ನಲೆ ರಾಜ್ಯ ಸರ್ಕಾರವು ಈ ಹಿಂದಿನ ಸರ್ಕಾರಗಳು ಮಾಡಿದ ಲೋಪಗಳನ್ನು ಸರಿಪಡಿಸುವ ಸಲುವಾಗಿ ಸಮೀಕ್ಷೆಗೆ ಮುಂದಾಗಿದೆ, ಸಮುದಾಯದ ಬಂಧುಗಳು ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ಮೂಲ ಜಾತಿ ಯನ್ನು ಆದಿ ದ್ರಾವಿಡ ಅಥವಾ ಆದಿ ಕರ್ನಾಟಕ ಎಂದು ನಮೂದಿಸದೆ ಹೊಲಯ ಎಂದು ನಮೂದಿಸಬೇಕಿದೆ ಎಂದರು.

ಮುಖಂಡರಾದ ಮುನಿಯಪ್ಪ ಮಾತನಾಡಿ ನಮ್ಮ
ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿದ್ದು,ಕೆಲ ದ್ವಂದ್ವಗಳಿಂದ ನಾವು ಹೆಚ್ಚಿದ್ದೇವೆ ಎಂಬ ಭಾವನೆ ಹಲವು ಸಮುದಾಯಗಳಲ್ಲಿ ಇದೆ, ಈ ಪ್ರಶ್ನೆಗೆ ಸೂಕ್ತ ಉತ್ತರವನ್ನು ಈ ಸಮೀಕ್ಷೆ ನೀಡುವ ಭರವಸೆ ಇದೆ ಎಂದರು.

ಈ ಸಮೀಕ್ಷೆಯನ್ನು ಸೂಕ್ತ ರೀತಿಯಲ್ಲಿ ನೆಡೆಸಿ ವರದಿ ಸಲ್ಲಿಕೆ ಮಾಡಲು ನ್ಯಾ. ನಾಗಮೋಹನ್ ದಾಸ್ ಅವರ ಅಯೋಗ ನೇಮಕ ಮಾಡಿದೆ.
ಹಾಗಾಗಿ ಆಯಾ ಜಾತಿಗಳು ಮೂಲ ಜಾತಿಯನ್ನು ಸ್ಪಷ್ಟವಾಗಿ ನಮೂದು ಮಾಡಿಸಬೇಕು ಎಂದು ಸಮುದಾಯಗಳಲ್ಲಿ ಮನವಿ ಮಾಡುತ್ತೇನೆ ಎಂದರು.ನಮ್ಮ ಹೊಲಯ ಸಮುದಾಯದಲ್ಲಿ 37 ಕ್ಕೂ ಅಧಿಕ ಉಪಜಾತಿಗಳಾಗಿದ್ದು, ಮೂಲ ಜಾತಿ ಕಾಲಂನಲ್ಲಿ ಹೊಲಯ ಅಥವಾ ಛಲವಾದಿ ಎಂದು ನಮೂದು ಮಾಡಿ ಎಂಬ ಮಾಹಿತಿಯನ್ನು ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲಿ ಮನೆ ಮನೆಗೆ ಕರಪತ್ರ ತಲುಪಿಸಿ ಪ್ರಚಾರ ಮಾಡುವ ಮೂಲಕ ಜಾಗೃತಿ ಮೂಡಿಸಲಿದ್ದೇವೆ ಎಂದು ಮುಖಂಡರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಛಲವಾದಿ ಸಮುದಾಯದ ಮುಖಂಡರಾದ ಮುನಿಯಪ್ಪ, ಮರಿಯಪ್ಪ, ಮುನಿರಾಜು, ಕೊನಘಟ್ಟ ರಾಮಾಂಜಿನಪ್ಪ , ತಳಗವಾರ ಪುನೀತ್, ಕನ್ನಮಂಗಲ ರಮೇಶ್, ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.