*ಕಾಮ್ರೆಡ್ ವಿಕ್ರಮ್ ರಾವ್ ಅವರಿಗೆ ಕೆಯುಡಬ್ಲ್ಯೂಜೆ ನುಡಿನಮನ*
*ಪತ್ರಕರ್ತರ ಸಂಘಟನೆಯನ್ನ ದೇಶದೆಲ್ಲಡೆ ವಿಸ್ತರಿಸಿ ಗಟ್ಟಿಗೊಳಿಸಿದ್ದ ಕಾಮ್ರೆಡ್: ಶಿವಾನಂದ ತಗಡೂರು*
ಬೆಂಗಳೂರು:ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷರಾಗಿದ್ದ ಕೆ. ವಿಕ್ರಮ್ ರಾವ್ ಅವರು ಉತ್ತಮ ಸಂಘಟಕರಷ್ಟೆ ಅಲ್ಲ, ಹೋರಾಟಗಾರರು ಆಗಿದ್ದರು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ಪತ್ರಕರ್ತರ ಸಂಘಟನೆಯಲ್ಲಿ ಸುದೀರ್ಘ ಅವಧಿಗೆ ರಾಷ್ಟ್ರೀಯ ಅಧ್ಯಕ್ಷರಾಗಿ ದೇಶದಾದ್ಯಂತ ಸಕ್ರಿಯವಾಗಿ ಸಂಘದ ಚಟುವಟಿಕೆಗಳನ್ನು ಒಗ್ಗೂಡಿಸಲು ಅವರಿಂದ ಸಾಧ್ಯವಾಯಿತು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ (ಐಎಫ್ ಡಬ್ಲ್ಯೂ.ಜೆ) ಮಾಜಿ ಅಧ್ಯಕ್ಷ ಕೆ. ವಿಕ್ರಮ್ ರಾವ್ ಅವರಿಗೆ ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪತ್ರಕರ್ತರ ವೇತನ ಆಯೋಗವೂ ಸೇರಿದಂತೆ ವಿವಿಧ ಅನುಕೂಲತೆಗಳನ್ನು ಪತ್ರಕರ್ತರಿಗೆ ದೊರಕಿಸಿಕೊಡುವಲ್ಲಿ ವಿಕ್ರಮ್ ರಾವ್ ಅವರ ಪಾತ್ರ ಪ್ರಮುಖವಾಗಿತ್ತು. ಸದಾ ಹೋರಾಟದ ಮನೋಭಾವವನ್ನು ಬೆಳೆಸಿಕೊಂಡಿದ್ದ ಅವರು ಟೈಮ್ಸ್ ಆಪ್ ಇಂಡಿಯಾ ಪತ್ರಿಕೆಯಲ್ಲಿ ಹಿರಿಯ ಪತ್ರಕರ್ತರಾಗಿ ಉತ್ತಮ ಹೆಸರನ್ನೂ ಗಳಿಸಿಕೊಂಡಿದ್ದರು ಎಂದೂ ಹೇಳಿದರು.
*ರಾಜ್ಯದೊಂದಿಗೆ ನಿಕಟನಂಟು*:
ಕೆ. ವಿಕ್ರಮ್ ರಾವ್ ಅವರು ಎಲ್ಲಾ ರಾಜ್ಯಗಳ ಪತ್ರಕರ್ತರೊಂದಿಗೆ ನಿಕಟ ಸಂಪರ್ಕ ಇರಿಸಿಕೊಂಡವರು. ಅದರಲ್ಲೂ ಕರ್ನಾಟಕದೊಂದಿಗಿನ ಅವರ ಸಂಬಂಧ ಅವಿನಾಭಾವವಾಗಿತ್ತು ಎಂದು ಶಿವಾನಂದ ತಗಡೂರು ಸ್ಮರಿಸಿಕೊಂಡರು.
ಶ್ರೀಕ್ಷೇತ್ರ ಶ್ರವಣಬೆಳಗೊಳ, ಶ್ರೀಕ್ಷತ್ರ ಆದಿಚುಂಚನಗಿರಿ, ತುಮಕೂರು, ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ರಾಷ್ಟ್ರೀಯ ಸಮ್ಮೇಳನ ಸಂಘಟಿಸುವಲ್ಲಿ ವಿಕ್ರಮ್ ರಾವ್ ಅವರ ಪಾತ್ರ ಪ್ರಮುಖವಾಗಿತ್ತು. ಕರ್ನಾಟಕದ ಎಲ್ಲಾ ಪತ್ರಕರ್ತರನ್ನೂ ದೇಶ-ವಿದೇಶಗಳ ಅಧ್ಯಯನ ಪ್ರವಾಸದ ವೇಳೆ ಜೊತೆಗೆ ಕರೆದೊಯ್ಯುವ ಭಾಂದವ್ಯದ ಮನೋಭಾವ ಅವರಲ್ಲಿತ್ತು ಎಂದೂ ಶಿವಾನಂದ ತಗಡೂರು ಹೇಳಿದರು.
ದೇಶದ ವ್ಯಾಪ್ತಿಯನ್ನು ದಾಟಿ ಶ್ರೀಲಂಕಾ, ನೇಪಾಳ ಮತ್ತಿತತರ ಹೊರ ದೇಶಗಳಲ್ಲಿಯೂ ಐಎಫ್ಡಬ್ಲ್ಯೂಜೆ ಸಂಘಟನೆಯನ್ನು ವಿಸ್ತರಿಸಿದ್ದು ವಿಶೇಷ ಎಂದು ಹೇಳಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ ಮಾತನಾಡಿ, ಕೆ. ವಿಕ್ರಮ್ ರಾವ್ ಅವರು ಪ್ರಬುದ್ಧ ಪತ್ರಕರ್ತರಾಗಿ ಸಂಘಟನೆಯಲ್ಲಿ ತೊಡಗಿಕೊಂಡವರು, ಅವರ ನೇರ ನಡೆ-ನುಡಿ ನಿಜಕ್ಕೂ ಪ್ರಶಂಸಾರ್ಹವಾಗಿತ್ತು ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ವೆಂಕಟ್ ಸಿಂಗ್ ರಾಯಚೂರು ಮಾತನಾಡಿ, ಸಂಘಟನಾತ್ಮಕ ಚಾತುರ್ಯ ಇದ್ದ ವಿಕ್ರಮ್ ರಾವ್ ಅವರ ಅಗಲಿಕೆ ಪತ್ರಕರ್ತರ ವಲಯಕ್ಕೆ ನಿಜಕ್ಕೂ ತುಂಬಲಾರದ ನಷ್ಟ ಎಂದರು.
ಸ್ತ್ರೀ ಜಾಗೃತಿ ಪತ್ರಿಕೆಯ ಸಂಪಾದಕಿ ಶೋಭಾ ಮಾತನಾಡಿ, ವಿಕ್ರಮ್ ಸಿಂಗ್ ಅವರು ಇಂದಿನ ಪತ್ರಕರ್ತರಿಗೆ ಮಾದರಿಯಾಗಿ ಬದುಕಿದವರು ಎಂದರು
ಕೆ.ಯೂ.ಡಬ್ಲ್ಯೂ.ಜೆ ಸಭಾಂಗಣದಲ್ಲಿ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ ವಿಕ್ರಮ್ ರಾವ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನ ಪಾರ್ಥನೆಯನ್ನೂ ನೆರವೇರಿಸಲಾಯಿತು.
ಸಮಾರಂಭದಲ್ಲಿ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ
ಕೆ.ಸತ್ಯನಾರಾಯಣ,
ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಮಾಜಿ ಕಾರ್ಯದರ್ಶಿ ಸಂಜೀವ್ ಕುಲಕರ್ಣಿ, ಕಲಬುರ್ಗಿ ದೇವೇಂದ್ರಪ್ಪ ಆವಂಟಿ ಕಲಬುರ್ಗಿ, ಹಿರಿಯ ಸದಸ್ಯೆ ಶಶಿಕಲಾ ಸೇರಿದಂತೆ ಹಲವರು ವಿಕ್ರಮ್ ರಾವ್ ಅವರ ಬಗ್ಗೆ ಮಾತನಾಡಿ, ಗುಣಗಾನ ಮಾಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಘಟಕದ ಉಪಾಧ್ಯಕ್ಷ ಜಿಕ್ರಿಯಾ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ದೇವರಾಜ್, ಜಿಲ್ಲಾ ಸಮಿತಿ ಸದಸ್ಯ ಎ.ಬಿ. ಶಿವರಾಜ್, ಪತ್ರಿಕಾ ವಿತರಕರ ರಾಜ್ಯಾಧ್ಯಕ್ಷ ಶಂಭುಲಿಂಗಯ್ಯ, ಶರಣು ಬಸಪ್ಪ, ಚೆನ್ನಬಸಪ್ಪ ರಾಯಚೂರು, ಎಸ್.ಕೆ. ಒಡೆಯರ್ ದಾವಣಗೆರೆ ಮುಂತಾದವರು ಉಪಸ್ಥಿತರಿದ್ದರು.