ಸತ್ಸಂಗ, ಸದ್ವಿಚಾರಗಳು ಆತ್ಮೋನ್ನತಿಯ ಸಾಧನೆಗೆ ಮೆಟ್ಟಿಲುಗಳಾಗಿವೆ–ಅನಿಲ್ ಕುಮಾರ್

ವಿಜಯಪುರ: ಶ್ರಾವಣಮಾಸದಾದ್ಯಂತ ಎಲ್ಲೆಡೆ ಪಾರಾಯಣ, ಅಧ್ಯಾತ್ಮಿಕ ಕಾರ್ಯಗಳು ಆನೂಚಾನವಾಗಿ ನಡೆಯುತ್ತಾ ಬಂದಿದ್ದು,ಸ್ತತ್ಸಂಗ ಸದ್ವಿಚಾರಗಳು ಮನುಷ್ಯನ ಆತ್ಮೋನ್ನತಿಯ ಸಾಧನೆಗೆ ಇರುವ ಮೆಟ್ಟಿಲುಗಳಾಗಿವೆ ಎಂದು ಶ್ರೀ ವೀರಭದ್ರಸ್ವಾಮಿ ಗೋಷ್ಟಿ ಅಕ್ಕನಬಳಗ ಸೇವಾ ಸಮಿತಿಯ ಅಧ್ಯಕ್ಷ ವಿ.ಅನಿಲ್ ಕುಮಾರ್ ತಿಳಿಸಿದರು.
ಪಟ್ಟಣದ ಅರಿವಿನ ಮನೆಯಲ್ಲಿ ಶ್ರೀ ವೀರಭದ್ರಸ್ವಾಮಿ ಗೋಷ್ಟಿ ಅಕ್ಕನಬಳಗ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಶ್ರಾವಣಮಾಸದ ಪುರಾಣ ಪ್ರವಚನ ಆರಂಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬೆಂಗಳೂರು ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಶರಣರ ಆದರ್ಶ, ತತ್ವ ಸಿದ್ಧಾಂತಗಳನ್ನು ಪಾಲಿಸಿಕೊಂಡು ಶರಣಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರಿಂದ ಸಮಾಜವು ಸಮಾನತೆಯ ಆಧಾರದಲ್ಲಿ ಸದೃಢವಾಗಬಲ್ಲದು. ಸಾತ್ವಿಕ ಶಕ್ತಿಯ ಮುಂದೆ ಹಿಂಸಾತ್ಮಕಶಕ್ತಿಯು ಸೋಲುತ್ತದೆ. ಸತ್ಯಕ್ಕೆ ಬದ್ಧರಾಗಿದ್ದವರಿಗೆ ಸಂಪತ್ತು, ಯಶಸ್ಸು, ಕೀರ್ತಿ ಎಲ್ಲವೂ ಲಭಿಸಬಲ್ಲದು. ಮಹಾತ್ಮರು ವೈಯಕ್ತಿಕ ಬದುಕನ್ನು ಸಮಾಜಕ್ಕೆ ಸಮರ್ಪಿಸಿಕೊಂಡು ಸದಾಕಾಲ ಲೋಕಕಲ್ಯಾಣಕ್ಕೆ ಮೀಸಲಿರಿಸಿದ್ದು, ಅವರ ಆದರ್ಶಗಳನ್ನು ಯುವಪೀಳಿಗೆಗೆ ಹಂಚಬೇಕಿದೆ ಎಂದರು.
ಕಾಯಕ ನಿಷ್ಟೆ, ಅನುಷ್ಟಾನದಲ್ಲಿ ಮುಂಚೂಣಿ:ಶಿಕಾರಿಪುರ ತಾಲ್ಲೂಕಿನ ಕಾಳೇನಹಳ್ಳಿ ಶ್ರೀ ಶಿವಯೋಗಾಶ್ರಮದ ಶ್ರೀ ರುದ್ರಮುನಿಶಿವಾಚಾರ್ಯಸ್ವಾಮೀಜಿರವರು ಹಾನಗಲ್ಲ ಕುಮಾರಸ್ವಾಮಿಗಳ ಎಲ್ಲಾ ಗುಣಗಳನ್ನೂ ಮೈಗೂಡಿಸಿಕೊಂಡು ಪ್ರಾಣಿಗಳಲ್ಲಿಯೂ ಮನುಷ್ಯತ್ವ ಗುಣವನ್ನು ಕಂಡಿದ್ದರು. ಕೃಷಿ ಕಾಯಕವನ್ನು ಸ್ವತಃ ಅನುಸರಿಸಿ ಎಲ್ಲರಿಗೂ ಮಾದರಿಯಾಗಿದ್ದರು. ಪವಾಡಪುರುಷರಾಗಿ ನುಡಿದಂತೆ ನಡೆದು ಬಸವಾದಿಶರಣರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಶಿವಯೋಗಾಶ್ರಮಕ್ಕೆ ಅಧ್ಯಾತ್ಮಿಕ, ಕಾಯಕ, ಸಾಮಾಜಿಕ ಕಳಕಳಿಯ ಚೈತನ್ಯ ತುಂಬಿದ್ದರು. ಮಲೆನಾಡಿನ ರಮಣಮಹರ್ಷಿಗಳೆನಿಸಿಕೊಂಡು ಕಾಯಕನಿಷ್ಟೆ, ಅನುಷ್ಟಾನಗಳಲ್ಲಿ ಮುಂಚೂಣಿಯಲ್ಲಿದ್ದವರು ಎಂದು ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ವಿವರಿಸಿದರು.
ಗೋಷ್ಟಿ ಬಳಗ ಸೇವಾಸಮಿತಿಯ ಕಾರ್ಯದರ್ಶಿ ಮ.ಸುರೇಶ್‌ಬಾಬು ಮಾತನಾಡಿ, ಕಳೆದ ೭೦ ವರ್ಷಗಳಿಂದ ಓದಿಕೇಳುವ ಮನೆಯಲ್ಲಿ ಅನೇಕರು ಪುರಾಣಪ್ರವಚನಗಳನ್ನು ಓದಿಕೇಳಿ ಬದುಕನ್ನು ಸಾರ್ಥಕ ಮಾಡಿ ಸಾಧನೆಗೈದಿದ್ದಾರೆ. ಶ್ರಾವಣ ಮಾಸದಾದ್ಯಂತ ಕಾಳೇನಹಳ್ಳಿ ಶ್ರೀ ರುದ್ರಮುನಿ ಶಿವಾಚಾರ್ಯ ಶಿವಯೋಗಿಗಳ ಜೀವನ ಚರಿತ್ರೆಯನ್ನು ಓದಲಾಗುವುದು ಎಂದರು.
ಗೋಷ್ಟಿ ಬಳಗ ಸೇವಾಸಮಿತಿಯ ಉಪಾಧ್ಯಕ್ಷೆ ಅಂಬಾಆಭವಾನಿ, ಮಹದೇವಮ್ಮ, ವಿಮಲಾಂಬ, ಮೀನಾ ಸುರೇಶ್ ಅವರಿಂದ ಪ್ರವಚನ ನಡೆಯಿತು. ಬೆಂಗಳೂರಿನ ಅನಿತಾಮಹೇಶ್ ಅವರಿಂದ ಶ್ಲೋಕಗಳ ಪಠಣ ನಡೆಯಿತು. ಪಾರ್ವತಮ್ಮ ಮುನಿಯಪ್ಪ, ಭಾರತಿ ಶಿವಪ್ರಸಾದ್, ಚಂದ್ರಕಲಾ, ಅರಿವಿನ ಮನೆಯ ಮಹಿಳೆಯರು ಉಪಸ್ಥಿತರಿದ್ದರು.
೨೬-೦೭-೨೦೨೫—-೧, ೨,೩: ವಿಜಯಪುರ ಪಟ್ಟಣದ ಅರಿವಿನ ಮನೆಯಲ್ಲಿ ಶ್ರೀ ವೀರಭದ್ರಸ್ವಾಮಿ ಗೋಷ್ಟಿ ಅಕ್ಕನಬಳಗ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಶ್ರಾವಣಮಾಸದ ಪುರಾಣಪ್ರವಚನ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ, ಗೋಷ್ಟಿ ಬಳಗದ ಅಧ್ಯಕ್ಷ ವಿ.ಅನಿಲ್‌ಕುಮಾರ್, ಕಾರ್ಯದರ್ಸಿ ಮ.ಸುರೇಶ್‌ಬಾಬು, ಮತ್ತಿತರರು ಇದ್ದರು.