ಪೆಟ್ರೋಲ್ ಬಂಕ್ ಸ್ಥಳಾಂತರಿಸುವಂತೆ ಕರವೇ ಯಿಂದ ಪ್ರತಿಭಟನೆ
ಚಾಮರಾಜನಗರ:: ತಾಲೂಕಿನ ಮಾದಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಸಂತ ತೆರೇಸಾ ಶಾಲೆಯ ಹತ್ತಿರ ನಿರ್ಮಾಣವಾಗುತ್ತಿರುವ ಪೆಟ್ರೋಲ್ ಬಂಕ್ ಸ್ಥಳಾಂತರಿಸುವಂತೆ ಸಂತ ತೆರೆಸ ಶಾಲೆಯ ಹತ್ತಿರ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡರ ಬಣ) ವತಿಯಿಂದ ಚಾಮರಾಜನಗರ ತಾಲೂಕು ಅಧ್ಯಕ್ಷ ಹಂಡ್ರಕಳ್ಳಿ ಸಂತೋಷ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇದೆ ವೇಳೆ ವೇದಿಕೆ ಜಿಲ್ಲಾಧ್ಯಕ್ಷ ಮಂಜೇಶ್.ಎನ್ ಮಾತನಾಡಿ, ನಮ್ಮ ಹೋರಾಟವು ಸಂತ ತೆರೆಸಾ ಶಾಲೆಯ ಉಳಿವಿಗಾಗಿ ನಡೆಯುತ್ತಿದೆ. ಶಾಲೆಯ ಪಕ್ಕದಲ್ಲಿ ಪೆಟ್ರೋಲ್ ಬಂಕ್ ನಿರ್ಮಾಣವಾಗುತ್ತಿದ್ದು, ಇದರಿಂದ ಶಾಲೆ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿರುವುದರ ಬಗ್ಗೆ ಸಂತ ತೆರೆಸ ಶಾಲೆಯ ಆಡಳಿತ ಮಂಡಳಿಯವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿರುತ್ತಾರೆ ಈ ಬಗ್ಗೆ ಯಾವುದೇ ಹಿಂಬರಹ ಬಂದಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಈ ಪೆಟ್ರೋಲ್ ಬಂಕ್ ನಿರ್ಮಾಣವಾಗುವುದರಿಂದ ವಾಯುಮಾಲಿನ್ಯ ಹೆಚ್ಚಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ.ಅಲ್ಲದೆ ಈ ಹಿಂದೆ ಇದೇ ಸ್ಥಳದಲ್ಲಿ ರಸ್ತೆ ಅಪಘಾತದಿಂದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ. ಆದ್ದರಿಂದ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು. ಅಲ್ಲದೇ ಜಿಲ್ಲಾಧಿಕಾರಿಗಳು ಪೆಟ್ರೋಲ್ ಬಂಕ್ ನಿರ್ಮಾಣವಾಗುತ್ತಿರುವುದನ್ನು ಸ್ಥಗಿತಗೊಳಿಸಲು ಮುಂದಾಗಬೇಕು, ಇನ್ನೂ ಒಂದು ವಾರದೊಳಗೆ ಈ ಪೆಟ್ರೋಲ್ ಬಂಕ್ ಅನ್ನು ಸ್ಥಳಾಂತರಿಸದಿದ್ದರೆ ನಮ್ಮ ಸಂಘಟನೆ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೇಮಂತ್, ತಾಲೂಕು ಅಧ್ಯಕ್ಷ ಹಂಡ್ರಕಳ್ಳಿ ಸಂತೋಷ್, ತಾಲೂಕು ಉಪಾಧ್ಯಕ್ಷ ಸುಂದರ್ ರಾಮಸಮುದ್ರ, ಕಾರ್ಯದರ್ಶಿ ವಿಜಯ್, ಅರ್ಜುನ್, ರಘು ಮಸಗಾಪುರ, ಪಾಪಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ