*ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಗೌರವ ಕಾರ್ಯದರ್ಶಿಗಳಾಗಿ ಎಚ್.ಬಿ.ಮದನ ಗೌಡ ನಾಮ ನಿರ್ದೇಶನ.*

*ಬೆಂಗಳೂರು:* ಕನ್ನಡ ಸಾಹಿತ್ಯ ಪರಿಷತ್ತಿನ ಧ್ಯೇಯೋದ್ದೇಶವನ್ನು ಸಫಲಗೊಳಿಸಲು ಮತ್ತು ಇನ್ನಷ್ಟು ಕ್ರಿಯಾಶೀಲತೆಯನ್ನು ತರಲು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಗೌರವ ಕಾರ್ಯದರ್ಶಿಗಳನ್ನಾಗಿ ಹಾಸನದ ಹೆಚ್.ಬಿ.ಮದನಗೌಡ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆ 9 (3)ರಲ್ಲಿ ಅಧ್ಯಕ್ಷರಿಗೆ ದತ್ತವಾಗಿರುವ ಅಧಿಕಾರದನ್ವಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ನಾಮ ನಿರ್ದೇಶನ ಮಾಡಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆತ್ತೂರಿನವರಾದ ಹೆಚ್.ಬಿ.ಮದನಗೌಡರು ಮೂರು ದಶಕಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಕನ್ನಡ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ. ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಇವರ ಅವಧಿಯಲ್ಲಿ ಹಲವು ಪ್ರಮುಖ ಸಾಹಿತ್ಯ ಚಟುವಟಿಕೆಗಳು ನಡೆದಿದ್ದು, ಕನ್ನಡ ಪರ ಚಿಂತನ-ಮಂಥನಗಳೂ, ವಿಚಾರಗೋಷ್ಟಿಗಳೂ ನಡೆದಿವೆ. ಕನ್ನಡ ಸಾಹಿತ್ಯದ ಪ್ರಮುಖ ಬರಹಗಾರರೆಲ್ಲರ ಜೊತೆಗೆ ನಿಕಟ ಸಂಬಂಧ ಹೊಂದಿರುವ ಹೆಚ್.ಬಿ.ಮದನಗೌಡರು ನಿರಂತರವಾಗಿ ಕನ್ನಡ ಸಾಹಿತ್ಯದ ಮತ್ತು ಕನ್ನಡ ಪರ ಸಂಘಟನೆಗಳಲ್ಲಿ ತೊಡಗಿಕೊಂಡಿದ್ದಾರೆ.

ಮಾಧ್ಯಮ ಕ್ಷೇತ್ರದಲ್ಲಿಯೂ ಸಕ್ರಿಯರಾಗಿರುವ ಹೆಚ್.ಬಿ.ಮದನ ಗೌಡರು ಪ್ರಸ್ತುತ ‘ಜನಮಿತ್ರ’ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾಗಿ, ನವದೆಹಲಿಯ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಪರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅಪಾರ ಅನುಭವ ಪಡೆದಿರುವ ಇವರು ಹಾಸನ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿ, ಹೀಗೆ ಹಲವು ಸಂಘಟನೆಗಳಲ್ಲಿ ಸೇವೆ ಸಲ್ಲಿಸಿದ ಸಶಕ್ತ ಅನುಭವವನ್ನು ಪಡೆದಿದ್ದಾರೆ, ಶ್ರವಣಬೆಳಗೊಳದಲ್ಲಿ 2006 ಮತ್ತು 2018ರಲ್ಲಿ ನಡೆದ ಮಹಾ ಮಸ್ತಕಾಭಿಷೇಕದ ರಾಷ್ಟ್ರ, ಅಂತರರಾಷ್ಟ್ರೀಯ ಮಾಧ್ಯಮ ಸಂಯೋಜಕರಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಕನ್ನಡ ಪ್ರಥಮ ಶಿಲಾಶಾಸನ ದೊರೆತ ಹಲ್ಮಿಡಿ ಗ್ರಾಮದಲ್ಲಿ ಶಾಸನದ ಪ್ರತಿಕೃತಿ ನಿರ್ಮಾಣದಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದಾರೆ.

ಕನ್ನಡ ಭಾಷೆಯ ಕುರಿತ ಅದಮ್ಯ ಪ್ರೇಮ ಮತ್ತು ಕನ್ನಡ ನಾಡಿನ ಕುರಿತು ಅಪಾರ ಅಭಿಮಾನ, ಬರಹಗಾರರರೊಂದಿಗೆ ಒಡನಾಟ, ಅಧ್ಯಯನ ಶೀಲತೆ ಹೀಗೆ ಬಹುಮುಖ ಕನ್ನಡ ಪರ ಆಸಕ್ತಿಯನ್ನು ಹೊಂದಿರುವ ಹೆಚ್.ಬಿ.ಮದನಗೌಡರು ಗೌರವ ಕಾರ್ಯದರ್ಶಿಯಾಗಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಇನ್ನಷ್ಟು ಕ್ರಿಯಾತ್ಮಕತೆಯನ್ನು ತುಂಬುವುದರ ಜೊತೆಗೆ ಧನಾತ್ಮಕ ಆಯಾಮವನ್ನು ನೀಡಲಿದ್ದಾರೆ, ಕನ್ನಡ ಸಾಹಿತ್ಯ ಪರಿಷತ್ತು ಇಂದು ಬಹುಮುಖಿ ಆಯಾಮಗಳನ್ನು ಪಡೆಯುತ್ತಿದ್ದು ಅದರ ಸರಹದ್ದಿನ ವಿಸ್ತರಣೆಗೆ ಇದು ನೆರವಾಗಲಿದೆ. ಎಂದು ಎಂದು ನಾಡೋಜ ಡಾ.ಮಹೇಶ ಜೋಶಿಯವರು ಆಶಿಸಿದ್ದಾರೆ.
ಎಂದು ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಮಾಧ್ಯಮ ವಿಭಾಗ
ಕನ್ನಡ ಸಾಹಿತ್ಯ ಪರಿಷತ್ತು ತಿಳಿಸಿದರು.