ಗ್ಯಾರೆಂಟಿ ಯೋಜನೆಗಳಿಂದ ಬಡ-ಮಧ್ಯಮ ವರ್ಗದ ಜನರ ಬದುಕು ಹಸನು–ಬಚ್ಚೇಗೌಡ
ಮುಗಬಾಳದಲ್ಲಿ ಕುಂದುಕೊರತೆ ಸಭೆ : ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಚಿಕ್ಕಹುಲ್ಲೂರು ಬಚ್ಚೇಗೌಡ ಹೇಳಿಕೆ
ಹೊಸಕೋಟೆ:ಸರ್ಕಾರ ಜಾರಿ ಮಾಡಿರುವ 5 ಗ್ಯಾರಂಟಿಗಳಿಂದ ರಾಜ್ಯದಲ್ಲಿ ಬಡ ಮಧ್ಯಮ ವರ್ಗದವರ ಬದುಕು ಹಸನಾಗಿದೆ ಎಂದು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಚಿಕ್ಕಹುಲ್ಲೂರು ಬಚ್ಚೇಗೌಡ ತಿಳಿಸಿದರು.
ತಾಲೂಕಿನ ಮುಗಬಾಳ ಗ್ರಾಮ ಪಂಚಾಯತ್ ಅವರಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಯಾವೊಬ್ಬ ಬಡ ಮಧ್ಯಮ ವರ್ಗದವರು ಕೂಡ ಹಸಿವಿನಿಂದ ಇರಬಾರದು. ಸಾಮಾಜಿಕ ಕ್ಷೇತ್ರದಿಂದ ದೂರ ಉಳಿಯಬಾರದು. ಸಾಮಾಜಿಕ ಕ್ಷೇತ್ರದ ಪ್ರತಿಯೊಂದು ಸ್ಥಳದಲ್ಲಿ ಗುರ್ತಿಸಿಕೊಂಡು ಅಭಿವೃದ್ಧಿಯತ್ತ ಸಾಗಿ ಸಮಾನತೆಯ ಜೀವನ ಸಾಗಿಸುವ ಉದ್ದೇಶದಿಂದ ಪಂಚ ಗ್ಯಾರಂಟಿಗಳನ್ನ ಕಾಂಗ್ರೆಸ್ ಸರಕಾರ ಜಾರಿಗೆ ತಂದಿತು. ಇದರ ಪರಿಣಾಮವಾಗಿ ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ 2 ಸಾವಿರ, ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್, ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಬಸ್ನಲ್ಲಿ ಉಚಿತ ಸಂಚಾರ, ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ ಧಕ್ಕುತ್ತಿದೆ. ಇದರಿಂದ ಬಡ ಮಧ್ಯಮ ವರ್ಗ ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯವಾಗಿದೆ ಎಂದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲೋಕೇಶ್ ಮಾತನಾಡಿ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ತಲುಪಿಸುವ ದೃಷ್ಟಿಯಿಂದ ಸರ್ಕಾರದ ವತಿಯಿಂದ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕುಂದು ಕೊರತೆ ಸಭೆಯನ್ನು ನಡೆಸಲಾಗುತ್ತಿದೆ. ಇದರಿಂದ ಸೌಲಭ್ಯಗಳು ತಲುಪುವಲ್ಲಿ ಇರುವಂತಹ ನ್ಯೂನತೆಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಗೃಹಜೋತಿ ಹಾಗೂ ಅನ್ನಭಾಗ್ಯದ ವಿಚಾರವಾಗಿ ದೂರುಗಳು ವ್ಯಾಪಕವಾಗಿ ಬಂದಿದ್ದು ಸಮಿತಿ ಅದನ್ನು ತ್ವರಿತವಾಗಿ ಬಗೆಹರಿಸಲಿದೆ ಎಂದರು.
ಗ್ರಾಮ ಪಂಚಾಯತ ಅಧ್ಯಕ್ಷೆ ಕಸ್ತೂರಿ ನಂಜಪ್ಪ, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಸಮಿತಿ ಸದಸ್ಯ ಹೇಮಣ್ಣ, ಅಮ್ಜದ್ ಬೇಗ್, ಮಂಜುನಾಥ್, ಬೆಸ್ಕಾಂ ಜೆಇ ನಿಂಗೇಗೌಡ, ಆಹಾರ ಇಲಾಖೆ ಶಿರಸ್ತೆದಾರ್ ಶಿವಕುಮಾರ್ ಸೇರಿದಂತೆ ಸ್ಥಳೀಯ ಗ್ರಾಪಂ ಸದಸ್ಯರು ಹಾಜರಿದ್ದರು.





