ಆಧುನಿಕ ಜೀವನಶೈಲಿಯ ಪ್ರಭಾವಕ್ಕೆ ಯುವ ಜನತೆ ಏಡ್ಸ್‌ನಂತಹ ಮಹಾಮಾರಿಗೆ ಬಲಿಯಾಗುತ್ತಿರುವುದು ಕಳವಳಕಾರಿ
ವಿಜಯಪುರ: ಹೋಬಳಿಯ ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ನಾರಾಯಣಪುರದ ಶ್ರೀ ಸಾಯಿ ಕಾನೂನು ಕಾಲೇಜು ಹಾಗೂ ಸಮುದಾಯ ಆರೋಗ್ಯ ಕೇಂದ್ರ ವಿಜಯಪುರ ಇವರ ಸಹಯೋಗದಲ್ಲಿ ತಾಲೂಕು ಮಟ್ಟದ ವಿಶ್ವ ಏಡ್ಸ್ ದಿನ-2025 ಕುರಿತು ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ. ಸನತ್ ಮಾತನಾಡಿ, ಆಧುನಿಕ ಜೀವನಶೈಲಿಯ ಪ್ರಭಾವಕ್ಕೆ ಒಳಗಾಗಿರುವ ಯುವ ಜನತೆ ಏಡ್ಸ್‌ನಂತಹ ಮಹಾಮಾರಿಗೆ ಬಲಿಯಾಗುತ್ತಿರುವುದು ಕಳವಳಕಾರಿ, ಈ ಕಾಯಿಲೆಗೆ ಔಷಧಿಯಿಲ್ಲ ರೋಗ ಬಾರದಂತೆ ಮುಂಜಾಗೃತೆ ವಹಿಸುವುದೇ ಇದಕ್ಕೆ ಪರಿಹಾರವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಹೊರಹೊಮ್ಮಬೇಕು. ಏಡ್ಸ್ ಕಾಯಿಲೆಯಿಂದ ಉಂಟಾಗುವ ತೊಂದರೆ ಹಾಗೂ ಜೀವ ಹಾನಿಯ ಕುರಿತು ಸಾರ್ವಜನಿಕರಲ್ಲಿ ವಿದ್ಯಾರ್ಥಿಗಳು ಅರಿವು ಮೂಡಿಸಬೇಕು ಎಂದರು.
ಶ್ರೀಸಾಯಿ ಕಾನೂನು ಕಾಲೇಜಿನ ಪ್ರಾಚಾರ್ಯ ಸದಾಶಿವ ಚಿದಾನಂದ ಕಾಂಬ್ಳೆ ಮಾತನಾಡಿ, ಹೆಚ್‌ಐ.ವಿ. ಸೋಂಕಿನ ವಿಚಾರದಲ್ಲಿ ಚಂಚಲ ಮನಸ್ಸು ಬಹಳ ಅಪಾಯಕಾರಿ, ಇತ್ತೀಚಿನ ಸಮೀಕ್ಷೆ ಪ್ರಕಾರ ಹೆಚ್.ಐ.ವಿ ಸೊಂಕು ಯುವ ಸಮುದಾಯದಲ್ಲಿ ಹೆಚ್ಚಿನ ರೀತಿಯಲ್ಲಿ ಕಂಡು ಬರುತ್ತಿರುವುದು ಆತಂಕಕಾರಿ. ಇದಕ್ಕೆ ಯುವ ಸಮುದಾಯದಲ್ಲಿನ ಹುಂಬತನ ಹಾಗೂ ಹೃದಯ ಮತ್ತು ಮನಸ್ಸಿನ ಮಾಲಿನ್ಯ ಬಹುಮುಖ್ಯ ಕಾರಣ. ಆದ್ದರಿಂದ ವಿದ್ಯಾರ್ಥಿಗಳು ಮತ್ತು ಯುವಸಮುದಾಯ ಮದುವೆಯಾಗುವವರೆಗೂ ಕಡ್ಡಾಯ ಬ್ರಹ್ಮಚರ್ಯ ಪಾಲನೆ ಮಾಡಬೇಕು ಎಂದರು.
ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಕೆ.ನಾರಾಯಣಸ್ವಾಮಿ ಮಾತನಾಡಿ, ಯುವಜನತೆ ಈ ದೇಶದ ದೊಡ್ಡ ಆಸ್ತಿ. ಇಂತಹ ಮಾನವ ಸಂಪನ್ಮೂಲ ಆರೋಗ್ಯವಾಗಿದ್ದಾಗ ಮಾತ್ರ, ನಾವು ಸದೃಢವಾದ ರಾಷ್ಟ್ರವನ್ನು ಕಟ್ಟುವುದಕ್ಕೆ ಸಾಧ್ಯವಾಗುತ್ತದೆ. ಯುವಜನತೆ ದುಶ್ಚಟಗಳಿಗೆ ಬಲಿಯಾಗಬೇಡಿ, ಮುಖ್ಯವಾಗಿ ಅಸುರಕ್ಷಿತ ಲೈಂಗಿಕತೆಗೆ ಒಳಗಾಗಬೇಡಿ, ಸೋಂಕಿತರಾದರೆ, ಜೀವನ ಪರ್ಯಂತರ ಅನುಭವಿಸಬೇಕಾಗುತ್ತದೆ ಎಂದರು.
ದೇವನಹಳ್ಳಿ ಸಾರ್ವಜನಿಕ ಆಸ್ಪತ್ರೆಯ ಆಪ್ತಸಮಾಲೋಚಕಿ ಯು.ಆರ್.ರೇಖಾ, ವಿಜಯಪುರ ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕಿ ಎಂ.ಸುಮಾ, ಮುಂತಾದವರು ಹಾಜರಿದ್ದರು.





