ಸ್ನಾನದ ಗೃಹಗಳನ್ನು ಸಾರ್ವಜನಿಕರ ಉಪಯೋಗಕ್ಕೆ ಕೊಡಬೇಕು ಎಂದು ಒತ್ತಾಯ
ವಿಜಯಪುರ: ಹೋಬಳಿಯ ಬಿಜ್ಜವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಲೇರಹಳ್ಳಿ ಮುನೇಶ್ವರಸ್ವಾಮಿ ದೇವಾಲಯದ ಮುಂಭಾಗದಲ್ಲಿ, ಸ್ವಚ್ಚ ಭಾರತ್ ಮಿಷನ್ ಹಾಗೂ ನರೇಗಾ ಯೋಜನೆಯಡಿಯಲ್ಲಿ ನಿರ್ಮಿಸಿರುವ ಸ್ನಾನದ ಗೃಹಗಳನ್ನು ಇದುವರೆಗೂ ಸಾರ್ವಜನಿಕರ ಉಪಯೋಗಕ್ಕೆ ಕೊಟ್ಟಿಲ್ಲ. ಇದುವರೆಗೂ ಸ್ನಾನದ ಗೃಹಗಳ ಕೊಠಡಿಗಳ ಬೀಗ ಸಹಿತ ತೆಗೆದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸರಕಾರಿ ಜಾಗದಲ್ಲಿ, ರಸ್ತೆ ಬದಿಯಲ್ಲಿ ನಿರ್ಮಿಸಿರುವ, ಸ್ನಾನದ ಗೃಹಗಳಿಗೆ ಗ್ರಾಮ ಪಂಚಾಯಿತಿಯಿಂದ ಹಣವನ್ನು ಖರ್ಚು ಮಾಡಿದ್ದರೂ, ಸಾರ್ವಜನಿಕರ ಬಳಕೆಗೆ ಕೊಟ್ಟಿಲ್ಲ. ಪ್ರತಿ ದಿನ ಇಲ್ಲಿನ ದೇವಾಲಯಕ್ಕೆ ನೂರಾರು ಮಂದಿ ಭಕ್ತರು ಬರುತ್ತಾರೆ. ಪ್ರತಿ ತಿಂಗಳ ಅಮಾವಾಸ್ಯೆಯಂದು, ಇಲ್ಲಿ ನಡೆಯುವಂತಹ ವಿಶೇಷ ಪೂಜೆಯಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಳ್ಳುತ್ತಾರೆ.
ಕೆಲವು ಭಕ್ತರು, ರೋಗ ಪೀಡಿತರು, ದೇವಾಲಯದ ಬಳಿಯಲ್ಲೆ ಇರುವ ಮಂಟಪದಲ್ಲಿ ತಂಗಿರುತ್ತಾರೆ. ಇವರೆಲ್ಲರೂ ಸ್ನಾನ ಮಾಡಬೇಕಾದರೆ, ಬಯಲಿನಲ್ಲಿ ಸೀರೆಗಳನ್ನು ಅಡ್ಡಕಟ್ಟಿಕೊಂಡು ಸ್ನಾನ ಮಾಡಿಕೊಳ್ಳುವಂತಹ ಪರಿಸ್ಥಿತಿ ಇದೆ. ಇವರೆಲ್ಲರಿಗೂ ಅನುಕೂಲವಾಗುವಂತೆ, ಸ್ನಾನದ ಗೃಹಗಳನ್ನು ತೆರೆಯಬೇಕು. ಸ್ನಾನದ ಗೃಹಗಳನ್ನು ಖಾಸಗಿ ವ್ಯಕ್ತಿಗಳಿಗೆ ಬಾಡಿಗೆಗೆ ಕೊಟ್ಟಿದ್ದಾರೆ. ದೇವಾಲಯದ ಹಿಂಭಾಗದಲ್ಲಿ ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸಿದ್ದಾರೆ. ಆದರೆ, ಅವುಗಳ ನಿರ್ವಹಣೆ ಸರಿಯಾಗಿಲ್ಲ. ದುರ್ನಾತ ಬೀರುತ್ತಿದೆ. ಶೌಚಾಲಯಗಳನ್ನು ಸ್ವಚ್ಚಗೊಳಿಸಬೇಕು. ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ದೇವಾಲಯ ಮುಂಭಾಗದಲ್ಲಿ ಸ್ವಚ್ಚ ಭಾರತ್ ಮಿಷನ್ ಹಾಗೂ ನರೇಗಾ ಯೋಜನೆಯಡಿಯಲ್ಲಿ, ಶೌಚಾಲಯಗಳನ್ನು ನಿರ್ಮಿಸಲು, ಅನುದಾನ ಕೊಡಲಾಗಿದೆ. ದೇವಾಲಯದ ಮುಂಭಾಗದಲ್ಲಿ ಶೌಚಾಲಯಗಳು ಬೇಡವೆಂದು ಸ್ನಾನದ ಗೃಹಗಳು ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.





