ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ದೂರವಿದ್ದು ವಿದ್ಯಾಭ್ಯಾಸದ ಪ್ರಗತಿಗೆ ಮುಂದಾಗಿ
ವಿದ್ಯಾವನ ಕಾಲೇಜಿನ 9ನೇ ವಾರ್ಷಿಕೋತ್ಸವ : ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮೋಹನ್ ಕುಮಾರ್ ಹೇಳಿಕೆ
ಹೊಸಕೋಟೆ:ವಿದ್ಯಾರ್ಥಿಗಳ ಕೈಗೆ ಮೊಬೈಲ್ ಬಂದ ನಂತರ ಓದಿನ ಕಡೆಗೆ ಗಮನ ಕಡಿಮೆ ಆಗಿದ್ದು ಮೊಬೈಲ್ ಗೀಳನ್ನು ಬಿಟ್ಟು ಶಿಕ್ಷಣದ ಪ್ರಗತಿ ಕಡೆಗೆ ಗಮನಹರಿಸಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮೋಹನ್ ಕುಮಾರ್ ತಿಳಿಸಿದರು.
ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಸೌಖ್ಯ ರಸ್ತೆಯಲ್ಲಿರುವ ವಿದ್ಯಾವನ ಕಾಲೇಜಿನ 9ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
2014-25 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ರಾಜ್ಯದಲ್ಲಿ 8ನೇ ಪಡೆದಿತ್ತು. ಈ ಬಾರಿ ಹೆಚ್ಚಿನ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕ್ರಮ ಕೈಗೊಂಡು ಕಾರ್ಯ ಪ್ರವೃತ್ತವಾಗಿದೆ. ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ವಿಶೇಷ ತರಗತಿಗಳು ಹಾಗೂ ಆನ್ ಲೈನ್ ತರಗತಿಗಳನ್ನು ನಡೆಸುವ ಮೂಲಕ ಫಲಿತಾಂಶ ಹೆಚ್ಚಿಸಲು ಪ್ರಯತ್ನ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬಂದು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಿದರೆ ಹೆಚ್ಚಿನ ಪ್ರಗತಿ ಕಾಣಬಹುದು ಎಂದರು.
ವಿದ್ಯಾವನ ಕಾಲೇಜಿನ ಪ್ರಾಂಶುಪಾಲ ಜಿ.ಭೈರರೆಡ್ಡಿ ಪ್ರಸ್ತುತ ಕಾಲಘಟ್ಟದಲ್ಲಿ ಶಿಕ್ಷಣ ಸಂಸ್ಥೆಗಳು ಮಕ್ಕಳ ಭವ್ಯ ಭವಿಷ್ಯವನ್ನು ನಿರ್ಮಾಣ ಮಾಡುವಲ್ಲಿ ಅನನ್ಯ ಪಾತ್ರ ವಹಿಸುತ್ತಿದೆ. ಯಾವ ದೇಶದಲ್ಲಿ ದೇವಾಲಯಗಳಿಗಿಂತ ಶಾಲೆಗಳ ಗಂಟೆ ಹೆಚ್ಚು ಬಾರಿಸುತ್ತದೆಯೋ ಅಲ್ಲಿ ಶಿಕ್ಷಣ ಶ್ರೀಮಂತವಾಗಿರುತ್ತದೆ. ಶಿಕ್ಷಣದಿಂದ ಪಡೆದ ಜ್ಞಾನದ ಸಂಪತ್ತಿನಿಂದ ಸಮಾಜದಲ್ಲಿ ಎಲ್ಲವನ್ನು ಪಡೆಯಲು ಸಾಧ್ಯವಾಗುತ್ತದೆ. ವ್ಯಕ್ತಿತ್ವ ನಿರ್ಮಾಣದಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ರಾಜ್ಯ, ರಾಷ್ಟ್ರದ ಅಭ್ಯುದಯದಲ್ಲಿ ಮಾನವ ಸಂಪನ್ಮೂಲದ ಪಾತ್ರ ಪ್ರಮುಖವಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಅದೇ ದೇವರ ಪೂಜೆ ಇದ್ದಂತೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ನೃತ್ಯ ನಾಟಕ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ಶಾಲೆ ಅಧ್ಯಕ್ಷೆ ಸುಜಾತ , ಅರ್ಲಿ ಫೌಂಡೇಶನ್ ಶಾಲೆಯ ಸಂಸ್ಥಾಪಕ ರಾಘವ ರೆಡ್ಡಿ , ಜ್ಞಾನ ಸಂಸ್ಕೃತಿ ಪಬ್ಲಿಕ್ ಶಾಲೆ ಪ್ರಾಂಶುಪಾಲ ಸಂದೇಶ್ ಹಾಗೂ ವಿದ್ಯಾವನ ಕಾಲೇಜಿನ ಶಿಕ್ಷಕರು ಸಿಬ್ಬಂದಿ ವರ್ಗ ಹಾಜರಿದ್ದರು.





