ರೇಷ್ಮೆ ಬೆಳೆಗಾರರು, ಗುಣಮಟ್ಟದ ಹಿಪ್ಪುನೇರಳೆ ಬೆಳೆಯುವುದರ ಮೂಲಕ ಆರ್ಥಿಕ ಸಬಲತೆ ಕಾಣಬೇಕು
ವಿಜಯಪುರ: ರೇಷ್ಮೆ ಬೆಳೆಗಾರರು, ಗುಣಮಟ್ಟದ ರೇಷ್ಮೆನೂಲು ಉತ್ಪಾದನೆ ಮಾಡಬೇಕಾದರೆ, ಗುಣಮಟ್ಟದ ಸೊಪ್ಪು ಬೆಳೆಯುವುದು ಅಗತ್ಯವಾಗಿದ್ದು, ಸುಕೃಷಿ ಸಂಸ್ಥೆಯವರು ಅಭಿವೃದ್ಧಿ ಪಡಿಸಿರುವ ಮಲ್ಭೆರಿ ಕಿಟ್ ನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಜಿ.ಕೆ.ವಿ.ಕೆ ಬೆಂಗಳೂರು ರೇಷ್ಮೆ ಕೃಷಿ ಮುಖ್ಯಸ್ಥ ಡಾ.ಕೆ.ಜಿ ಭಾನುಪ್ರಕಾಶ್ ಹೇಳಿದರು.
ಹೋಬಳಿಯ ಹರಳೂರು ನಾಗೇನಹಳ್ಳಿ ಗ್ರಾಮದಲ್ಲಿ ರೈತರೊಬ್ಬರ ಹಿಪ್ಪುನೇರಳೆ ತೋಟದಲ್ಲಿ ರೇಷ್ಮೆ ಬೆಳೆಗಾರರು ಮತ್ತು ರೈತರಿಗೆ ಆಯೋಜಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿ.ಕೆ.ವಿ.ಕೆ ಬೆಂಗಳೂರು ಸಂಸ್ಥೆಯಿಂದ ಪ್ರಾಯೋಗಿಕವಾಗಿ ಒಂದು ವರ್ಷ ಉಪಯೋಗಿಸಿದ ನಂತರ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲಾಗಿದೆ. ಉತ್ತಮ ಗುಣಮಟ್ಟದ ಸೊಪ್ಪಿನ ಇಳುವರಿ ಮತ್ತು ಎಲ್ಲಾ ರೋಗಗಳು ಸಹ ನಿಯಂತ್ರಣ ಆಗಿವೆ. ಎಲ್ಲಾ ರೈತರು ಮಲೆರಿ ಕಿಟ್ ನ್ನು ಸಿಂಪಡಿಸಿ, ಹಿಪ್ಪುನೇರಳೆ ಸೊಪ್ಪಿನ ಇಳುವರಿ ಮತ್ತು ಗೂಡಿನ ಗುಣಮಟ್ಟ ಹಾಗೂ ಉತ್ಪಾದನೆ ಹೆಚ್ಚಿಸಿಕೊಳ್ಳಬೇಕು ಎಂದರು.
ಜಿ.ಕೆ.ವಿ.ಕೆ ಬೆಂಗಳೂರು ರೇಷ್ಮೆ ಕೃಷಿ ಮುಖ್ಯಸ್ಥೆ ಡಾ.ವಿನೋದಾ ಅವರು ಮಾತನಾಡಿ, ರೇಷ್ಮೆ ಕೃಷಿಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುವ ತಾಜ್ಯಗಳನ್ನು ನೇರವಾಗಿ ಹಿಪ್ಪುನೇರಳೆ ತೋಟಗಳಿಗೆ ಉಪಯೋಗಿಸದೆ. ವೆಸ್ಟ್ ಡಿ ಕಂಪೋಸರ್ ಉಪಯೋಗಿಸಿ, ಘನತಾಜ್ಯಗಳನ್ನು ಸಂಪೂರ್ಣವಾಗಿ ಡಿ.ಕಾಂಪೋಸ್ಟ್ ಮಾಡಿ, ತೋಟಗಳಿಗೆ ಉಪಯೋಗಿಸಲು ದೇಶಿ ಹಸುಗಳ ಗಂಜಳ ಮತ್ತು ಸಗಣಿಯನ್ನು ಉಪಯೋಗಿಸಿಕೊಂಡು ರೈತರು ಸಾವಯವ ಕೃಷಿ ಮಾಡುವ ಮುಖಾಂತರ ರಾಸಾಯನಿಕ ಗೊಬ್ಬರ ಮತ್ತು ಕೀಟ ನಾಶಕಗಳ ಬಳಕೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದರು.
ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯ ಮಳ್ಳೂರು ಶಿವಣ್ಣ ಅವರು ಮಾತನಾಡಿ, ಕೇಂದ್ರ ರೇಷ್ಮೆ ಮಂಡಳಿಯ ಮುಂದಿನ ಸಭೆಯಲ್ಲಿ, ರೈತರಿಗೆ ಅತಿ ಮುಖ್ಯವಾಗಿ ಸೊಪ್ಪುಕಟಾವು ಮಾಡುವ ಯಂತ್ರ ಅಭಿವೃದ್ಧಿ ಪಡಿಸಿ, ರೈತರಿಗೆ ನೀಡುವ ಬಗ್ಗೆ ಮತ್ತು ಮಲ್ಲೆರಿ ಕಿಟ್ ರೈತರಿಗೆ ಸಹಾಯ ಧನದ ರೂಪದಲ್ಲಿ ನೀಡಲು ಇಲಾಖೆಯ ಆಯುಕ್ತರು, ಸಚಿವರು, ಮತ್ತು ಹಿರಿಯ ಅಧಿಕಾರಿಗಳ ಗಮನ ಸೆಳೆಯಲಾಗುತ್ತದೆ.
ರೇಷ್ಮೆಗೂಡಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಬರುವುದರಿಂದ, ಉತ್ತಮ ಮಾರುಕಟ್ಟೆ ವ್ಯವಸ್ಥೆಯೂ ಇರುವುದರಿಂದ ಎಲ್ಲಾ ರೈತರು ರೇಷ್ಮೆ ಕೃಷಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಲು ಮುಂದಾಗಬೇಕು ಎಂದರು.
ರೇಷ್ಮೆ ಇಲಾಖೆಯ ಉಪನಿರ್ದೇಶಕ ಸಿ.ಎಂ ಲಕ್ಷ್ಮಣ್ ಅವರು ಮಾತನಾಡಿ, ಇಲಾಖೆಯಿಂದ ರೈತರಿಗೆ ದೊರೆಯುವ ಎಲ್ಲಾ ಸೌಲಭ್ಯಗಳನ್ನು ತಲುಪಿಸಲಾಗುತ್ತಿದೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು, ಏಳು ವರ್ಷ ಆಗಿರುವ ರೈತರಿಗೆ ಮತ್ತೆ ಹನಿನೀರಾವರಿ ಘಟಕಕ್ಕೆ ಸೌಲಭ್ಯ ಸಿಗಲಿದೆ. ನೂರು 100 ಮೊಟ್ಟೆಗೆ ಸಿ.ಎಸ್.ಆರ್. ಹುಳು ಚಾಕಿ ಸಾಕಾಣಿಕೆಗೆ ವೆಚ್ಚ ರೂ.1000 ಮತ್ತು ಪ್ರತಿ ಸಿ.ಎಸ್.ಆರ್ ಗೂಡಿಗೆ ರೂ.30 ರಂತೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇಲಾಖೆಯಿಂದ ಎಲ್ಲಾ ರೈತರಿಗೆ ಉಚಿತವಾಗಿ ಸೋಂಕು ನಿವಾರಕಗಳನ್ನು ನೀಡುತ್ತಿದ್ದು ಸಲಕರಣೆಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ.75, ಎಸ್.ಸಿ, ಎಸ್.ಟಿ.ರೈತರಿಗೆ ಶೇ 90 ರೂಪದಲ್ಲಿ ಸಹಾಯಧನ ನೀಡುತ್ತಿದ್ದು, ಎಲ್ಲಾ ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಡಾ.ಅಂಬಿಕಾ, ರೇಷ್ಮೆ ಸಹಾಯಕ ನಿರ್ದೇಶಕ ಎಲ್.ಪಿ ಧನಂಜಯ, ರೇಷ್ಮೆವಿಸ್ತರಣಾಧಿಕಾರಿ ಕೆ.ಟಿ.ಪ್ರಭಾಕರ್ ಮುಂತಾದವರು ಹಾಜರಿದ್ದರು.





