ಬೆಂಗಳೂರು: ಮಾಧ್ಯಮ ಬಳಗ ಗೃಹ ನಿರ್ಮಾಣ ಸಹಕಾರ ಸಂಘದ ೨೦೨೨-೨೩ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಭೆ ದಿನಾಂಕ ೨೧-೦೯-೨೦೨೩ರಂದು ಗುರುವಾರ ಬೆಳಿಗ್ಗೆ ೧೧.೦೦ ಗಂಟೆಗೆ ರಾಜಾಜಿನಗರದ ‘ಡಿ’ ಬ್ಲಾಕ್‌ನಲ್ಲಿರುವ ಶ್ರೀ ಅಂಬಾಭವಾನಿ ದೇವಸ್ಥಾನ ಮಿನಿ ಹಾಲ್‌ನಲ್ಲಿ ನೆರವೇರಿತು. ಸಭೆಯಲ್ಲಿ ಸಂಘದ ಕಾರ್ಯಚಟುವಟಿಕೆ ಪ್ರಗತಿಯ ಬಗ್ಗೆ ಸುಧೀರ್ಘವಾಗಿ ಚರ್ಚಿಸಲಾಯಿತು.
ಸಂಘದ ಆಶಯದಂತೆ ಸದಸ್ಯರಿಗಾಗಿ ವಸತಿ ಬಡಾವಣೆ ನಿರ್ಮಿಸಲು ಜಮೀನು ಆಯ್ಕೆ ಮಾಡುವ ವಿಚಾರದ ಬಗ್ಗೆ ಚರ್ಚಿಸಲಾಯಿತು. ಆಡಳಿತ ಮಂಡಳಿ ವರದಿ ಹಾಗೂ ೨೦೨೨-೨೩ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಯಿತು.
ಸದಸ್ಯರ ಪ್ರಶ್ನೆಗೆ ಉತ್ತರವಾಗಿ ಪ್ರಮುಖವಾಗಿ ಒಂದು ವರ್ಷದ ಅವಧಿಯಲ್ಲಿ ಆಡಳಿತ ಮಂಡಳಿಯು ಮಾದರಿ ಸಮಗ್ರ ಬೈಲಾ ರಚನೆ ಮತ್ತು ಅನುಮೋದನೆ, ವೃತ್ತಿ ತೆರಿಗೆ, ಆದಾಯ ತೆರಿಗೆ ಗೊಂದಲ ಪರಿಹರಿಸಿದ್ದು, ೧೪ ವರ್ಷಗಳ ಲಾಭ ನಷ್ಟಗಳ ನಂತರದ ಲಾಭಾಂಶ ವಿಲೇ. ಆಪದ್ಧನ ನಿಧಿ, ಸಹಕಾರ ನಿಧಿ ಹೂಡಿಕೆ ಮುಂತಾದ ಜವಾಬ್ದಾರಿಗಳನ್ನು ನಿರ್ವಹಿಸಿರುವ ಬಗ್ಗೆ ತಿಳಿಸಿದರು. ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಆಸಕ್ತಿಯಿರುವ ಸದಸ್ಯರನ್ನು ಒಳಗೊಂಡ ಸಲಹಾ ಸಮನ್ವಯ ಸಮಿತಿಯನ್ನು ರಚಿಸುವ ಕುರಿತು ಪ್ರಸ್ತಾಪಿಸಲಾಯಿತು. ಖಾಲಿಯಿರುವ ನಿರ್ದೇಶಕ ಸ್ಥಾನಗಳನ್ನು ಕೂಡಲೆ ಭರ್ತಿ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಭಿಪ್ರಾಯ ವ್ಯಕ್ತವಾಯಿತು. ಸಭೆ ಆರಂಭಕ್ಕೆ ಮುನ್ನ ಇತ್ತೀಚೆಗೆ ನಿಧನರಾದ ಸಂಘದ ನಿರ್ದೇಶಕರಾದ ಮುಳ್ಳಹಳಿ ಸೂರಿ ಮತ್ತು ಹೆಚ್.ಎಂ. ನಾರಾಯಣಸ್ವಾಮಿ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಗಣನೀಯ ಸಂಖ್ಯೆಯ ಸದಸ್ಯರು ಹಾಜರಿದ್ದ ಸಭೆಯಲ್ಲಿ ಅಧ್ಯಕ್ಷರಾದ ಶಾಂತಮ್ಮ, ಉಪಾಧ್ಯಕ್ಷ ಮಂಡಿಬೇಲೆ ರಾಜಣ್ಣ ಹಾಗೂ ನಿರ್ದೇಶಕರಾದ ಕೆ.ಎಲ್. ಲೋಕೇಶ್, ಹೆಚ್.ಎಸ್. ವೃಷಭರಾಜು, ಆರ್. ರಮೇಶ್, ಚನ್ನಕೇಶವಮೂರ್ತಿ ಎಂ., ಎಂ.ಎಸ್. ನಾಗರಾಜ್ ಮತ್ತಿತರರು ಪಾಲ್ಗೊಂಡಿದ್ದರು.