ಮೇ14 ಮತ್ತು15 ರಂದು ದೊಡ್ಡಬಳ್ಳಾಪುರ ನಗರ ದೇವತೆ ಮುತ್ಯಾಲಮ್ಮ ಜಾತ್ರೆ

ದೊಡ್ಡಬಳ್ಳಾಪುರ: ನಗರ ದೇವತೆ ಶ್ರೀಮುತ್ಯಾಲಮ್ಮ ದೇವರ ಜಾತ್ರೆ ಇದೇ ಮೇ 14 ಮತ್ತು 15 ರಂದು ನಡೆಯಲಿದೆ ಎಂದು ಮುತ್ಯಾಲಮ್ಮ ಸೇವಾ ಸಮಿತಿ ದತ್ತಿ ಅಧ್ಯಕ್ಷ ಎಚ್.ಹನುಮಂತು ಅವರು ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಮುತ್ಯಾಲಮ್ಮ ದೇವಸ್ಥಾನದಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಮುತ್ಯಾಲಮ್ಮ ದೇವಿ ಜಾತ್ರೆಯನ್ನು ಮೇ.14 ಮತ್ತು 15 ರಂದು ನಡೆಸಲು ದಿನಾಂಕ ನಿಗದಿಪಡಿಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಪ್ರತಿ ವರ್ಷವು ಯುಗಾದಿ ಹಬ್ಬ ಮುಗಿದ 20 ದಿನಗಳಲ್ಲಿ ದೇವಾಲಯದ ಸುತ್ತಲಿನ ಏಳು ಗ್ರಾಮಗಳ ಜನರು ಸೇರಿ ಜಾತ್ರೆ ನಡೆಸುತ್ತಿದ್ದರು. ಆದರೆ ಈ ಬಾರಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಜಾತ್ರೆಯನ್ನು ನೀತಿ ಸಂಹಿತೆ, ಬಸವ ಜಯಂತಿ ಎರಡು ಮುಕ್ತಾಯವಾದ ನಂತರ ಜಾತ್ರೆಯನ್ನು ಪ್ರತಿ ವರ್ಷದಂತೆ ಅದ್ದೂರಿಯಾಗಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ದೇವಾಲಯದ ಸುತ್ತಲಿನ ಗ್ರಾಮಗಳಾದ ದರ್ಗಾಜೋಗಹಳ್ಳಿ, ನಾಗಸಂದ್ರ,ರೋಜಿಪುರ, ಕೊಡಿಗೇಹಳ್ಳಿ, ಕುರುಬರಹಳ್ಳಿ ಇತರೆ ಗ್ರಾಮಗಳಿಂದ ತೇರು ಹಾಗೂ ಹೂವಿನ ಆರತಿಗಳೊಂದಿಗೆ ಭಕ್ತರು ಜಾತ್ರೆಗೆ ಬರಲಿದ್ದಾರೆ. ಮೊದಲ ದಿನ ತೇರುಗಳೊಂದಿಗೆ ಮುತ್ಯಾಲಮ್ಮದೇವಿಯ ಉತ್ಸವ ನಡೆಯಲಿದೆ. ಎರಡನೆ ದಿನ ಹಗಲು ಪರುಷೆ ನಡೆಯಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಶ್ರೀಮುತ್ಯಾಲಮ್ಮ ಸೇವಾ ಸಮಿತಿ ದತ್ತಿಯ ಗೌರವ ಅಧ್ಯಕ್ಷ ಡಿ.ಬಿ.ಹನುಮಂತರಾವ್, ಕಾರ್ಯಾಧ್ಯಕ್ಷ ಡಿ.ಎನ್. ತಿಮ್ಮರಾಜು, ಉಪಾಧ್ಯಕ್ಷ ಕೆ.ನಾಗೇಶ್, ಕಾರ್ಯದರ್ಶಿ ಅರ್.ಪ್ರಭಾಕರ್, ಖಜಾಂಜಿ ಜೆ.ವೈ.ಮಲ್ಲಪ್ಪ, ಸಂಘಟನಾ ಕಾರ್ಯದರ್ಶಿ ಜೆ.ಕುಮಾರ್, ಜಂಟಿ ಕಾರ್ಯದರ್ಶಿ ಗೋವಿಂದರಾಜು ಹಾಗೂ ನಿರ್ದೇಶಕರು ಇದ್ದರು.