ರಾಗಿ ಹುಲ್ಲಿನ ಬಣವೆಗೆ ಬೆಂಕಿ : ₹1ಲಕ್ಷ ಮೌಲ್ಯದ ಮೇವು ಭಸ್ಮ
ದೊಡ್ಡಬಳ್ಳಾಪುರ: ರಾಗಿ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಮೇವು ಭಸ್ಮವಾದ ಘಟನೆ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಕಾಡತಿಪ್ಪೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವೆಂಕಟಪ್ಪ ಎಂಬುವರಿಗೆ ಸೇರಿದ ರಾಗಿ ಬಣವೆಗೆ ಇಂದು ಬೆಳಿಗ್ಗೆ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆಗೆ ಬಣವೇ ಸಂಪೂರ್ಣ ನಾಶವಾಗಿದೆ.
ಅಂದಾಜು 1 ಲಕ್ಷ ಮೌಲ್ಯದ ರಾಗಿ ಹುಲ್ಲು ಬೆಂಕಿಗೆ ಆಹುತಿಯಾಗಿದೆ. ಕೂಡಲೇ ರೈತ ವೆಂಕಟಪ್ಪ ಹಾಗೂ ಸ್ಥಳೀಯರು ಪಕ್ಕದಲ್ಲೇ ಇದ್ದ ಹೊಂಡದಿಂದ ನೀರು ತಂದು ಸುರಿದು ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು. ಆದರೆ, ಬೆಂಕಿಯ ಕೆನ್ನಾಲಿಗೆ ನಿಮಿಷಗಳಲ್ಲೇ ಬಣವೆಯನ್ನು ಭಸ್ಮ ಮಾಡಿತು.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ರಾಗಿ ಹುಲ್ಲು ಸಂಪೂರ್ಣ ಭಸ್ಮವಾಗಿದೆ. ಹುಲ್ಲಿನ ಬಣವೆಗೆ ಬೆಂಕಿ ಬಿದ್ದ ಪರಿಣಾಮ ಜಾನುವಾರುಗಳಿಗೆ ಮೇವಿಲ್ಲದೇ ರೈತ ವೆಂಕಟಪ್ಪ ಪರದಾಡುವಂತಾಗಿದೆ.