ಅಪ್ರಾಪ್ತರಿಗೆ ಬೈಕ್ ಚಾಲನೆಗೆ ನೀಡಿದರೆ ಪೋಷಕರ ಮೇಲೆ ಕೇಸ್ ದಾಖಲು–ಅಮರೇಶ್ ಗೌಡ
ದೊಡ್ಡಬಳ್ಳಾಪುರ: ಸಂಚಾರಿ ನಿಯಮ ಉಲ್ಲಂಘನೆ, ಅಪ್ರಾಪ್ತರಿಂದ ಬೈಕ್ ಚಾಲನೆ ಹಾಗೂ ವ್ಹೀಲಿಂಗ್ ಮಾಡುವ ಪುಂಡರಿಗೆ ಕಡಿವಾಣ ಹಾಕಲು ನಗರ ಠಾಣೆ ಪೊಲೀಸರು ಅಖಾಡಕ್ಕೆ ಇಳಿದಿದ್ದಾರೆ.
ಶನಿವಾರ ನಗರದ ದೊಡ್ಡಮ್ಮ ದೇವಿ ದೇವಸ್ಥಾನ ಹಾಗೂ ವಿದ್ಯಾನಿಧಿ ಪದವಿ ಪೂರ್ವ ಕಾಲೇಜು ಬಳಿ ಲಾಠಿ ಹಿಡಿದು ರಸ್ತೆಗಿಳಿದ ಪೊಲೀಸರು, 20ಕ್ಕೂ ಹೆಚ್ಚು ಮಂದಿ ಅಪ್ರಾಪ್ತರಿಂದ ಬೈಕ್ ವಶಪಡಿಸಿಕೊಂಡರು.
ನಗರ ಠಾಣೆ ಇನ್ ಸ್ಪೆಕ್ಟರ್ ಎ.ಅಮರೇಶಗೌಡ ಅವರು ಅಪ್ರಾಪ್ತರ ಪೋಷಕರನ್ನು ಠಾಣೆಗೆ ಕರೆಸಿ ಸಭೆ ನಡೆಸಿದರು.
ಅಪ್ರಾಪ್ತ ಮಕ್ಕಳಿಗೆ ಬೈಕ್ ನೀಡಿದರೆ ಆಗುವ ಅನಾಹುತ, ಕಠಿಣ ಕಾನೂನಿನ ಸಾಧ್ಯತೆಗಳ ಕುರಿತು ಮನವರಿಕೆ ಮಾಡಿಕೊಟ್ಟರು. ಯಾವುದೇ ಕಾರಣಕ್ಕೂ ಅಪ್ರಾಪ್ತರಿಗೆ ಬೈಕ್ ನೀಡಬಾರದು. ಈ ಬಾರಿ ಎಚ್ಚರಿಕೆ ನೀಡಿ ತಲಾ ₹500 ದಂಡ ವಿಧಿಸಲಾಗಿದೆ. ಇದು ಪುನರಾವರ್ತನೆಯಾದರೆ ಬೈಕ್ ಜಪ್ತಿ ಮಾಡುವ ಜೊತೆಗೆ ಪೋಷಕರ ವಿರುದ್ಧ ಮೋಟರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟರು.
ಇದಲ್ಲದೇ ವ್ಹೀಲಿಂಗ್ ಮಾಡುವ ರಸ್ತೆಗಳಲ್ಲಿ ಪೊಲೀಸರು ನಿಗಾ ವಹಿಸಿದ್ದು, ಪುಂಡರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಎಂದರು. ಏಕಮುಖ ಸಂಚಾರ ವ್ಯವಸ್ಥೆಯನ್ನು ಮರು ಜಾರಿ ಮಾಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.