ರಾಜ್ಯಪಾಲರಿಂದ ಸಿಎಂ ಸಿದ್ದರಾಮಯ್ಯನವರಿಗೆ ಶೋಕಾಸ್ ನೋಟಿಸ್: ಶೋಕಾಸ್ ನೋಟಿಸ್ನ್ನು ಹಿಂಪಡೆಯುವಂತೆ ಕಾಂಗ್ರೆಸ್ ಪ್ರತಿಭಟನೆ
ದೊಡ್ಡಬಳ್ಳಾಪುರ:ಮುಡಾ ಹಗರಣ ಹಿನ್ನೆಲೆ ಸಿಎಂ ಸಿದ್ಧರಾಮಯ್ಯ ವಿರುದ್ಧ ರಾಜ್ಯಪಾಲರು ಹೊರಡಿಸಿರುವ ಶೋಕಾಸ್ ನೋಟಿಸ್ನ್ನು ಖಂಡಿಸಿ ಕೂಡಲೇ ಶೋಕಾಸ್ ನೋಟಿಸ್ ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
ದೊಡ್ಡಬಳ್ಳಾಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ಕೆ ಪಿ ಸಿ ಸಿ ಸದಸ್ಯ ಲಕ್ಷೀಪತಿ ಮಾತನಾಡಿ,ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಾಹಂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನೀಡಿದ್ದ ದೂರಿನನ್ವಯ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಆದೇಶ ಹೊರಡಿಸಬಾರದು. ಬಿಜೆಪಿಯ ಏಜೆಂಟ್ ಆಗಿ ಅಬ್ರಾಹಂ ವರ್ತಿಸುತ್ತಿದ್ದಾರೆ. ಸಿದ್ದರಾಮಯ್ಯ ವರ್ಚಸ್ಸನ್ನು ತಾಳಲಾರದೇ ಬಿಜೆಪಿಗರು ಕುತಂತ್ರ ಮಾಡುತ್ತಿದ್ದಾರೆ. ಬಿಜೆಪಿಗರು ಸಿದ್ದರಾಮಯ್ಯ ಅವರಿಗೆ ಕಳಂಕ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಲಕ್ಷ್ಮಿಪತಿ ಆರೋಪಿಸಿದರು.
ಮುಂದಿನ ದಿನಗಳಲ್ಲಿ ಏನಾದರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದರೆ ರಾಜ್ಯದಲ್ಲಿ ಉಗ್ರ ಹೋರಾಟ, ಪ್ರತಿಭಟನೆಗಳು ನಡೆಯುತ್ತವೆ. ಕೂಡಲೇ ಸಿದ್ದರಾಮಯ್ಯಗೆ ರಾಜ್ಯಪಾಲರು ಕೊಟ್ಟಿರುವ ಶೋಕಾಸ್ ನೋಟಿಸ್ ನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಮುಖುಂಡ ಕೆ.ಎಂ ಕೃಷ್ಣಮೂರ್ತಿ ಮಾತನಾಡಿ,ಸಿದ್ದರಾಮಯ್ಯನವರ ರಾಜಕೀಯ ಜೀವನದಲ್ಲಿ ಶಾಸಕರಾಗಿ, ಸಚಿವರಾಗಿ, ಉಪಮುಖ್ಯಮಂತ್ರಿಯಾಗಿ ಹಾಗೂ ಮುಖ್ಯಮಂತ್ರಿಯಾಗಿರುವ ಕಾಲದಲ್ಲಿ ಅಧಿಕಾರ ದುರುಪಯೋಗ, ಹಗರಣಗಳು ನಡೆದಿರುವ ನಿದರ್ಶನಗಳಿಲ್ಲ. ಅವರು ತಮ್ಮ ರಾಜಕೀಯದುದ್ದಕ್ಕೂ ನಿಷ್ಕಳಂಕ ರಾಜಕಾರಣಿಯಾಗಿದ್ದಾರೆ ಎಂದರು.
ಸಿ ಎಂ ಸಿದ್ದರಾಮಯ್ಯನವರ ವಿರುದ್ಧ ದೂರು ನೀಡಿದ ದೂರುದಾರನ ಹಿನ್ನೆಲೆ ಆತನ ಮೇಲೆ ಇರುವ ಆರೋಪಗಳು, ದೂರುಗಳನ್ನು ಪರಿಶೀಲಿಸಬೇಕು. ದೂರುದಾರ ನೀಡಿರುವ ದೂರಿನಲ್ಲಿ ಮೂಡಾನಿವೇಶನ ಮಂಜೂರು ಮಾಡಿದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಯಾವುದೇ ಶಿಫಾರಸ್ಸು ಮಾಡಿರುವುದಿಲ್ಲ. ಹಾಗಾಗಿ ಶೋಕಾಸ್ ನೋಟಿಸ್ ನ್ನು ಹಿಂಪಡೆಯುವಂತೆ ಕೋರಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ನೀಡಲಾಯಿತು.
ಈ ವೇಳೆ ಪಕ್ಷದ ಮುಖಂಡರಾದ ಆದಿತ್ಯ ನಾಗೇಶ್,ಕೃಷ್ಣಮೂರ್ತಿ,ಕಾಂತರಾಜು, ಜಿಲ್ಲಾ ಎಸ್.ಟಿ ಘಟಕದ ಅಧ್ಯಕ್ಷ ಮುನಿಕೃಷ್ಣ, ಜಿಲ್ಲಾ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ಅಹಿಂದ ಸಂಘಟನೆಗಳ ಒಕ್ಕೂಟದ ಮುಖಂಡರು, ಸೇರಿದಂತೆ ಕಾರ್ಯಕರ್ತರು ಇದ್ದರು.