ಮಾನವ ಸರಪಳಿ ಯಶಸ್ವಿಗೆ ಎಲ್ಲರೂ ಸಹಕರಿಸುವಂತೆ ಪ್ರಭಾರ ಜಿಲ್ಲಾಧಿಕಾರಿ ಮೋನಾ ರೋತ್ ಮನವಿ

ಚಾಮರಾಜನಗರ:ಜಿಲ್ಲಾಡಳಿತದಿಂದ ಸೆಪ್ಟೆಂಬರ್ 15ರಂದು ಹಮ್ಮಿಕೊಂಡಿರುವ ಮಾನವ ಸರಪಳಿ ಕಾರ್ಯಕ್ರಮಕ್ಕೆ ಎಲ್ಲರ ಸಹಭಾಗಿತ್ವ ಅವಶ್ಯವಾಗಿದ್ದು, ಜಿಲ್ಲೆಯ ಎಲ್ಲಾ ಸಂಘಸಂಸ್ಥೆಗಳು, ಕನ್ನಡಪರ, ಪ್ರಗತಿಪರ, ಇತರೆ ಸಂಘಟನೆಗಳು ಸಹಕಾರ ನೀಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪ್ರಭಾರ ಜಿಲ್ಲಾಧಿಕಾರಿಗಳಾದ ಮೋನಾ ರೋತ್ ಅವರು ಮನವಿ ಮಾಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಮಾನವ ಸರಪಳಿ ಕಾರ್ಯಕ್ರಮ ಸಂಬಂಧ ವಿವಿಧ ಸಂಘಸಂಸ್ಥೆಗಳ ಮುಖಂಡರು ಹಾಗೂ ಪದಾಧಿಕಾರಿ
ಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸೆಪ್ಟೆಂಬರ್ 15ರಂದು ಬೀದರ್‍ನ ಬಸವಕಲ್ಯಾಣದಿಂದ ಚಾಮರಾಜನಗರದವರೆಗೆ ಏಕಕಾಲದಲ್ಲಿ ಮಾನವ ಸರಪಳಿ ಕಾರ್ಯಕ್ರಮವನ್ನು ರಾಜ್ಯದುದ್ದಕ್ಕೂ ಆಯೋಜಿಸಲಾಗಿದೆ. ಪ್ರಜಾಪ್ರಭುತ್ವದ ಹಬ್ಬವನ್ನು ಎಲ್ಲರೂ ಸೇರಿ ಆಚರಿಸೋಣ. ಮಾನವ ಸರಪಳಿಯಲ್ಲಿ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿ, ಸಿಬ್ಬಂದಿ, ಎಲ್ಲಾ ಸಮುದಾಯಗಳು, ಆದಿವಾಸಿಗಳು, ವಿವಿಧ ಸಂಘಸಂಸ್ಥೆಗಳು, ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರ ಭಾಗವಹಿಸುವಿಕೆ ಅವಶ್ಯವಾಗಿದೆ ಎಂದರು.

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಮಾನವ ಸರಪಳಿ ಸಂಬಂಧ ಆರಂಭದಲ್ಲಿ ಸಭೆಯಲ್ಲಿ ಹಾಜರಿದ್ದ ವಿವಿಧ ಸಂಘಸಂಸ್ಥೆಗಳು, ಸಂಘಟನೆಗಳ ಮುಖಂಡರು, ಪದಾಧಿಕಾರಿಗಳಿಗೆ ತಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆ ನೀಡುವಂತೆ ಪ್ರಭಾರ ಜಿಲ್ಲಾಧಿಕಾರಿಗಳಾದ ಮೋನಾ ರೋತ್ ಅವರು ತಿಳಿಸಿದರು.

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಜಿಲ್ಲೆಯಲ್ಲಿ ಏರ್ಪಡಿಸಲಾಗಿರುವ ಮಾನವ ಸರಪಳಿ ಸಂಬಂಧ 24 ಕಿ.ಮೀ. ಅಂತರದಲ್ಲಿ ಬರುವ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಟೋ ಪ್ರಚಾರ, ಟಾಂ.ಟಾಂ ಹೊಡೆಸಬೇಕು. ಪ್ರತಿ ಕಿ.ಮೀ.ಗೆ ಸಂವಿಧಾನ ಪೀಠಿಕೆ ಅಳವಡಿಸಬೇಕು. ಪ್ರತಿ ಮನೆಮನೆಗೂ, ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸಿ ಮಾನವ ಸರಪಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು. ನಗರದ ಪಚ್ಚಪ್ಪ ವೃತ್ತದಿಂದ ವರ್ತಕರ ಭವನದವರೆಗಿನ ತ್ರಿವರ್ಣ ಧ್ವಜ ಪ್ರದರ್ಶನವನ್ನು ರಾಮಸಮುದ್ರದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆವರೆಗೂ ವಿಸ್ತರಿಸಬೇಕು ಎಂದು ಮುಖಂಡರು ತಿಳಿಸಿದರು.

ಭಾರತವು ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಸಂವಿಧಾನದಡಿ ಸೌಲಭ್ಯಗಳನ್ನು ಎಲ್ಲರೂ ಪಡೆಯುತ್ತಿದ್ದು, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು, ವರ್ತಕರು, ರೈತರು, ಆಟೋ ಸಂಘಟನೆಗಳು, ರೋಟರಿ ಸಂಸ್ಥೆ, ಮಹಿಳಾ ಸ್ವಸಹಾಯ ಗುಂಪುಗಳು, ಎನ್.ಆರ್.ಎಲ್.ಎಂ. ಸದಸ್ಯರು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳು ಸೇರಿದಂತೆ ಎಲ್ಲರೂ ಮಾನವ ಸರಪಳಿಯಲ್ಲಿ ಪಾಲ್ಗೊಳ್ಳಬೇಕು. ಮಾನವ ಸರಪಳಿ ರಚನಾ ಸಮಯದಲ್ಲಿ 24 ಕಿ.ಮೀ. ಅಂತರದ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಿಸಬೇಕು ಎಂದು ವಿವಿಧ ಸಂಘಸಂಸ್ಥೆಗಳ ಮುಖಂಡರು ಸಭೆಯಲ್ಲಿ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಭಾರ ಜಿಲ್ಲಾಧಿಕಾರಿಗಳಾದ ಮೋನಾ ರೋತ್ ಅವರು ಮುಖಂಡರ ಸಲಹೆಗಳಿಗೆ ಸಮ್ಮತಿ ಸೂಚಿಸಿದರು.

ಇದೇ ವೇಳೆ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಮಾನವ ಸರಪಳಿ ಶಾಂತಿ, ಸಹಬಾಳ್ವೆ, ಸಾಮರಸ್ಯದ ಸಂಕೇತವಾಗಿದೆ. ಪಚ್ಚಪ್ಪ ವೃತ್ತದಿಂದ ರಾಮಸಮುದ್ರದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆವರೆಗೆ ತ್ರಿವರ್ಣ ಧ್ವಜ ಪ್ರದರ್ಶನದ ವೇಳೆ ಸಂಘಟನೆಗಳು, ಸಂಘಸಂಸ್ಥೆಗಳು ರಾಷ್ಟ್ರಧ್ವಜ ಹೊರತುಪಡಿಸಿ ಬೇರೆ ಯಾವುದೇ ಧ್ವಜಗಳನ್ನು ಪ್ರದರ್ಶಿಸುವಂತಿಲ್ಲ. ಬದಲಾಗಿ ಶಲ್ಯ ಧರಿಸಬಹುದು. ಎಲ್ಲಾ ಪುರುಷರು ಸಾಂಪ್ರದಾಯಿಕ ಪಂಚೆ, ಅಂಗಿ ಹಾಗೂ ಮಹಿಳೆಯರು ಸೀರೆ ಧರಿಸಬೇಕು. ಮಾನವ ಸರಪಳಿಯಲ್ಲಿ ಭಾಗವಹಿಸುವ ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಕಾಡಂಚಿನ ಜನರು, ಆದಿವಾಸಿಗಳು ಸಾಂಪ್ರಾದಾಯಿಕ ಉಡುಗೆ-ತೊಡುಗೆಗಳನ್ನು ಪ್ರದರ್ಶಿಸಬಹುದು. ಮಾನವ ಸರಪಳಿ ರಾಜ್ಯಾದ್ಯಂತ ನಡೆಯುತ್ತಿರುವುದರಿಂದ 5 ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿಗಳಿಗೆ ಅವಕಾಶವಿದೆ. ಎಲ್ಲಾ ಪ್ರಕ್ರಿಯೆಗಳು ಡ್ರೋಣ್ ಕ್ಯಾಮೆರಾ ಮೂಲಕ ದಾಖಲೀಕರಣವಾಗಲಿದೆ ಎಂದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪಿ. ಲಕ್ಷ್ಮೀ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಬಿಂದ್ಯಾ, ಜಿಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು, ರೈತಮುಖಂಡರಾದ ಹೊನ್ನೂರು ಪ್ರಕಾಶ್, ಮುಖಂಡರಾದ ಎಸ್. ಶ್ರೀಕಂಠಮೂರ್ತಿ, ಅರಕಲವಾಡಿ ನಾಗೇಂದ್ರ, ಕೆ.ಎಂ ನಾಗರಾಜು, ಕಂದಹಳ್ಳಿ ನಾರಾಯಣ, ಎಂ. ರಂಗೇಗೌಡ, ಸೋಲಿಗರ ಬಸವರಾಜು, ಜೆ.ಬೊಮ್ಮಯ್ಯ, ಗಣಿಗಮಂಗಲ ರಾಜಪ್ಪ, ಬೆಳ್ಳಿಯಪ್ಪ, ಎಂ. ಮಾದೇಶ, ಜಯಂತಿ, ಸಿ.ಎಂ ಕೃಷ್ಣಮೂರ್ತಿ, ಚಾ.ಗು ನಾಗರಾಜು, ಪಿ. ಸುರೇಶ್, ಪಿ. ಸಂಘಸೇನ, ಹಂಡ್ರಕಳ್ಳಿ ಬಸವರಾಜು, ಹೊಂಗನೂರು ನಟರಾಜು, ನಾಗೇಶ್, ದಡದಹಳ್ಳಿ ಶಂಕರ, ಎ.ಬಿ ನಾಗರಾಜು, ಮಾಜಿ ತಾಲೂಕು ಸದಸ್ಯ ಶಿವಸ್ವಾಮಿ, ಯರಿಯೂರು ರಾಜಣ್ಣ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಕೇತಮ್ಮ, ರತ್ನಮ್ಮ, ಬಿ. ಮಾದೇಶ್, ಎಂ. ಜಡೇಸ್ವಾಮಿ, ಮಾದಮ್ಮ, ಬ್ಯಾಡಮೂಡ್ಲು ಬಸವಣ್ಣ, ಶ್ರೀನಿವಾಸಮೂರ್ತಿ, ಸೋಮಶೇಖರ್‍ಮೂರ್ತಿ, ಸೋಮಶೇಖರ್, ಸೋಮಸುಂದರ್, ಪಣ್ಯದಹುಂಡಿ ರಾಜು, ಚಾ.ರಂ ಶ್ರೀನಿವಾಸಗೌಡ, ಮಾಜಿ ನಗರಸಭಾ ಸದಸ್ಯ ಬಿ. ನಾಗರಾಜು, ಎಂ. ದೊರೆಸ್ವಾಮಿ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದರು.
ವರದಿ ಆರ್ ಉಮೇಶ್ ಮಲಾರಪಾಳ್ಯ