ಚಿರತೆ ಓಡಿಸಲು ಗುಂಡು ಹಾರಿಸಿದ ಅರಣ್ಯ ಇಲಾಖೆ ಸಿಬ್ಬಂದಿ: ನಾಲ್ವರು ರೈತರಿಗೆ ಗಾಯ

ಚಾಮರಾಜ‌ಗರ:ಚಿರತೆಯನ್ನು ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡಿನಿಂದ ನಾಲ್ವರು ರೈತರು ಗಾಯಗೊಂಡಿದ್ದಾರೆಚಾ. ಇದೇ ವೇಳೆ ಚಿರತೆಯೂ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಮದ್ದೂರು ಗ್ರಾಮದಲ್ಲಿ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಮದ್ದೂರು ಗ್ರಾಮದಲ್ಲಿ ರೈತರ ಜಮೀನಿನಲ್ಲಿ ಚಿರತೆ ಕಾಣಿಸಿಕೊಂಡಿದೆ. ಈ ಬಗ್ಗೆ ರೈತರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆಯನ್ನು ಓಡಿಸಲು ತಮ್ಮ ಬಂದೂಕಿನಿಂದ ಗುಂಡನ್ನು ಹಾರಿಸಿದ್ದಾರೆ.

ಈ ವೇಳೆ ಗಲಿಬಿಲಿ ಉಂಟಾಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಹಾರಿಸಿದ ಗುಂಡಿನಿಂದ ನಾಲ್ವರಿಗೆ ಗುಂಡು ತಗುಲಿದ್ದು ನಾಲ್ಕು ಜನ ರೈತರು ಗಾಯಗೊಂಡಿದ್ದಾರೆ. ಈ ವೇಳೆ ಚಿರತೆಯೂ ಸಹ ಮೃತಪಟ್ಟಿದ್ದು, ಚಿರತೆ ಯಾವುದರಿಂದ ಮೃತಪಟ್ಟಿದೆ ಎನ್ನುವುದನ್ನು ಇನ್ನೂ ಸಹ ಖಚಿತಪಡಿಸಿಲ್ಲ. ಗಾಯಗೊಂಡ ವ್ಯಕ್ತಿಗಳನ್ನು ಇದೇ ಗ್ರಾಮದ ಶಿವು, ರವಿ, ರಂಗಸ್ವಾಮಿ ಹಾಗೂ ಮೂರ್ತಿ ಎಂದು ಗುರುತಿಸಲಾಗಿದೆ.

ಗಾಯಗೊಂಡ ಈ ನಾಲ್ಕು ರೈತರನ್ನು ಯಳಂದೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೆಗಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿರತೆಯು ಸಹಜವಾಗಿಯೇ ಮೃತಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ

ಚಿರತೆಯು ಅರಣ್ಯ ಇಲಾಖೆಯವರು ಹಾರಿಸಿದ ಗುಂಡಿನಿಂದಲೇ ಮೃತಪಟ್ಟಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆದರೆ ಅರಣ್ಯ ಇಲಾಖೆಯವರು ಇದು ಸಹಜವಾಗಿಯೇ ಮೃತಪಟ್ಟಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಉನ್ನತ ಮಟ್ಟದ ಅಧಿಕಾರಿಗಳು ಪರಿಶೀಲನೆ ನಡೆಸಿ ಮುಂದಿನ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವರದಿ ಆರ್ ಉಮೇಶ್ ಮಲಾರಪಾಳ್ಯ