ಅಕ್ಷರ ಬೀಜ ಬಿತ್ತುವ ಮೂಲಕ ಅಭಿವೃದ್ಧಿಯ ಚಿಂತಕರಾಗಿರುವ ಶಿಕ್ಷಕರು ಈ ದೇಶದ ಸಂಪತ್ತು ಶಾಸಕ ಎ.ಆರ್.ಕೃಷ್ಣಮೂರ್ತಿ
ಯಳಂದೂರು:ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ನಂತರ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು.
ಈ ವೇಳೆ ಶಾಸಕ ಎ. ಆರ್. ಕೃಷ್ಣಮೂರ್ತಿ ರವರು ಮಾತನಾಡಿ ಶಿಕ್ಷಕ ಎಂಬುವುದು ಕೇವಲ ಪದವಲ್ಲ ಅದು ಜಗತ್ತನ್ನೇ ಬೆಳಗುವ ಅದ್ಭುತ ಶಕ್ತಿ, ಈ ದಿನ ಶಿಕ್ಷಕರ ದಿನಾಚರಣೆಯಲ್ಲಿ ನಿಮಗೆ ಸಿಹಿ ಸುದ್ದಿ ಎಂದರೆ ಕಳೆದ ಬಾರಿ ಶಿಕ್ಷಕರ ಸಂಘದವರು ನಮಗೆ ನಿವೇಶನ ನೀಡಬೇಕೆಂದು ಮನವಿ ನೀಡಿದ್ದರು, ಅದಕ್ಕೆ ಪೂರಕವಾಗಿ ಎಲ್ಲರ ಸಹಕಾರ ಪಡೆದು ಪಟ್ಟಣ ಪಂಚಾಯಿತಿಯ ನಡವಳಿಯಲ್ಲಿ ಚರ್ಚಿಸಿ ಎಲ್ಲ ಗೌರವಾನ್ವಿತ ಸದಸ್ಯರು ಹಾಗೂ ನೂತನ ಅಧ್ಯಕ್ಷರ ಒಪ್ಪಿಗೆ ಮೇರೆಗೆ ಶಿಕ್ಷಕರ ಭವನ ನಿರ್ಮಾಣಕ್ಕೆ ನಿವೇಶನವನ್ನು ಮಂಜೂರು ಮಾಡಲಾಗಿದೆ, ಈ ಬಾರಿ ನಡೆದ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಕೆಲವು ವ್ಯತ್ಯಾಸಗಳು ಕಂಡುಬಂದಿದ್ದು ಶಿಕ್ಷಕರು ಮುಂದಿನ ಬಾರಿ ಇದನ್ನ ಸರಿಪಡಿಸಿಕೊಳ್ಳಬೇಕು, ಶಿಕ್ಷಕರು ತಮ್ಮ ಪವಿತ್ರ ಸೇವೆಯ ಜೊತೆಗೆ ದೇಶದ ಪ್ರಜೆಗಳನ್ನು ರೂಪಿಸುವ ಮೂಲಕ ದೇಶದ ಪ್ರಗತಿಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಮುಖ್ಯ ಭಾಷಣಕಾರರಾದ ಡಾ.ಶಿವಕುಮಾರ್ ರವರು ಮಾತನಾಡಿ ಶಿಕ್ಷಣ ಬದುಕಿನ ತೆರೆದ ಪುಸ್ತಕವಾಗಿರಬೇಕು ಒಬ್ಬ ವ್ಯಕ್ತಿಯ ಸಾಧನೆಯ ಮೂಲ ಪ್ರೇರಣೆ ಶಿಕ್ಷಕರೇ ಆಗಿದ್ದಾರೆ ಮಕ್ಕಳಿಗೆ ಉತ್ತಮ ಜೀವನ ರೂಪಿಸುವುದರ ಜೊತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಶಿಕ್ಷಕರಿಂದ ಆಗಬೇಕಾಗಿದೆ, 1962 ರಿಂದಲೂ ಸೆಪ್ಟೆಂಬರ್ 5 ಭಾರತದಲ್ಲಿ ಶಿಕ್ಷಕರ ದಿನಾಚರಣೆ ಎಂದು ಆಚರಿಸಿಕೊಂಡು ಬರಲಾಗಿದೆ, ಅಂದಿನಿಂದ ಸೆಪ್ಟೆಂಬರ್ 5 ರಾಧಾಕೃಷ್ಣನ್ ರವರ ಜನ್ಮದಿನವನ್ನು ನೆನೆಯುವ ಜೊತೆಗೆ ಶಿಕ್ಷಕರ ದಿನವನ್ನು ಆಚರಿಸುತ್ತ ಬರುತ್ತಿದ್ದೇವೆ, ನಮ್ಮೆಲ್ಲ ನೆಚ್ಚಿನ ಶಿಕ್ಷಕರನ್ನು ಸಹ ನಾವು ಪ್ರತಿ ವರ್ಷ ಜೀವನದುದ್ದಕ್ಕೂ ನೆನೆಯುತ್ತೇವೆ, ಇಂತಹ ಒಂದು ವಿಶೇಷ ದಿನವನ್ನು ಆಚರಿಸಲು ಕಾರಣರಾದ ಸರ್ವಪಲ್ಲಿ ರಾಧಾಕೃಷ್ಣನ್, ಜ್ಯೋತಿ ಬಾಪುಲೆ ರವರಿಗೆ ನಾವು ಚಿರಋಣಿ ಆಗಬೇಕು, ಭಾರತದ ಮೊದಲ ಸ್ತ್ರೀವಾದಿಗಳಲ್ಲಿ ಸಾವಿತ್ರಿ ಬಾಪುಲೆ ಹೆಸರನ್ನು ಪರಿಗಣಿಸಲಾಗಿದೆ, ದೇಶದ ಮೊದಲ ಮಹಿಳಾ ಶಿಕ್ಷಕಿ ಮತ್ತು ಮುಖ್ಯೋಪಾಧ್ಯಾಯಣಿಯಾಗಿದ್ದರು, ಇವರು ಭಾರತದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ ಕಾರ್ಯಕರ್ತರಾಗಿದ್ದರು, ಸಾಮಾಜಿಕವಾಗಿ ನಿರ್ಮಿಸಿದ ತಾರತಮ್ಯದ ಆಚರಣೆ ಗಳಿಂದ ಮುಕ್ತರಾಗಲು ಶಿಕ್ಷಣವನ್ನು ಪಡೆಯುವಂತೆ ಪ್ರೇರೇಪಿಸಿದರು.ಸಾಮಾಜಿಕ ಅಸಮಾನತೆಗಳನ್ನು ಹೋಗಲಾಡಿಸಲು ಸ್ತ್ರೀ ಶಿಕ್ಷಣದಲ್ಲಿ ಬಲವಾಗಿ ನಂಬಿಕೆ ಇಟ್ಟ ಪತಿ ಜ್ಯೋತಿಬಾಪುಲೆ ಅವರ ಮುಂದಾಲೋಚನೆಯಿಂದ ಮಾತೆ ಸಾವಿತ್ರಿ ಬಾ ಫುಲೆ ರವರು ಶಿಕ್ಷಣದ ಆದಿಯನ್ನು ಕಂಡುಕೊಂಡರು,ಹಾಗಾಗಿ ನನ್ನೆಲ್ಲಾ ಸಹಪಾಠಿಗಳೇ ನಾನು ಮೊದಲೇ ಹೇಳಿದಂತೆ ನಮಗೆ ಪಾಠ ಮಾಡಿ ವಿದ್ಯೆ ಬುದ್ಧಿ ಕಲಿಸುವ ಗುರುವೇ ನಮಗೆ ಮೊದಲ ತಂದೆ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿ. ಓ. ಮಾರಯ್ಯ, ಬಿ. ಆರ್. ಸಿ. ನಂಜುಂಡಯ್ಯ, ಟೌನ್ ಪಂಚಾಯತಿ ಅಧ್ಯಕ್ಷೆ ಲಕ್ಷ್ಮಿ, ಸದಸ್ಯರಾದ ರವಿ,ಸಿ. ಓ. ಮಹೇಶ್ ಕುಮಾರ್,ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವೈ. ಎಂ. ಮಂಜುನಾಥ್,ಕಾರ್ಯದರ್ಶಿ ಅಮ್ಮನಪುರ ಮಹೇಶ್, ಜಿಲ್ಲಾ ಖಜಾಂಚಿ ಸಲೀನ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೀರಭದ್ರಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಸೋಮಣ್ಣ,ದೈಹಿಕ ಶಿಕ್ಷಣ ಪರಿವೀಕ್ಷಕ ಶಾಂತರಾಜು, ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ರೇಚಣ್ಣ,ಶಿಕ್ಷಕರಾದ ಮಹದೇವ್, ನಂಜಯ್ಯ,ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಎಲ್ಲಾ ಶಿಕ್ಷಕರ ಸಂಘಗಳು, ಲಿಪಿಕ ನೌಕರರ ಸಂಘ, ತಾಲ್ಲೂಕಿನ ಎಲ್ಲಾ ಶಿಕ್ಷಕ ಶಿಕ್ಷಕಿಯರು ಹಾಗೂ ಸಾರ್ವಜನಿಕರು ಹಾಜರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ