ಜಾತಿಗಣತಿ ಸಮಯದಲ್ಲಿ ಹೊಲಯ ಎಂದು ನಮೂದಿಸಬೇಕು– ಶಾಸಕ ಎ.ಆರ್ ಕೃಷ್ಣಮೂರ್ತಿ
ಚಾಮರಾಜನಗರ: ಸರ್ಕಾರದಿಂದ ನಡೆಯುತ್ತಿರುವ ಒಳ ಮೀಸಲಾತಿ ಜಾರಿಗಾಗಿ ಪರಿಶಿಷ್ಟ ಜನಾಂಗದ ಉಪ ಪಂಗಡದವರು ಜಾತಿಗಣತಿ ಸಮಯದಲ್ಲಿ ಹೊಲಯ ಎಂದು ನಮೂದಿಸಬೇಕು ಎಂದು ಶಾಸಕ ಎ.ಆರ್
ಕೃಷ್ಣಮೂರ್ತಿ ಅವರು ಕರೆ ನೀಡಿದರು.
ಚಾಮರಾಜನಗರ.ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ ಬಲಗೈ, ಹೊಲಯ, ಛಲವಾದಿ, ಒಳ ಮೀಸಲಾತಿ ಜಾಗೃತಿ ಸಮಿತಿ ಹಾಗೂ ‘ಒಳ ಮೀಸಲಾತಿ ಕುರಿತು ಕಾರ್ಯಗಾರ’ ಸಭೆಯಲ್ಲಿ ಮಾತನಾಡಿದ ಅವರು ಪರಿಶಿಷ್ಟ ಜಾತಿಯ ಸಮೀಕ್ಷೆಗೆ ಬಂದಾಗ ಮನೆಯ ಮುಖ್ಯಸ್ಥರು ಜಾತಿ ಕಾಲಂ ನಲ್ಲಿ ಹೊಲಯ ಎಂಬ ಪದವನ್ನು ನಮೂದಿಸುವ ಮೂಲಕ ನಮ್ಮ ವಂಶಸ್ಥರ ಉಳಿವಿಗಾಗಿ ಎಲ್ಲರೂ ಜವಾಬ್ದಾರಿಯಾಗಿ ನಮೂದಿಸಬೇಕು ಎಂದು ತಿಳಿಸಿದರು.
ಕರ್ನಾಟಕ ಸರ್ಕಾರದ ಯೋಜನಾ ನಿರ್ದೇಶಕರಾದ ಡಿ.ಚಂದ್ರಶೇಖರಯ್ಯ ಅವರು ಮಾತನಾಡಿ, ಒಳ ಮೀಸಲಾತಿ ಜಾರಿ ಪರವಾಗಿ ನಾವಿದ್ದೇವೆ, ಈ ಸಂಬಂಧ ಸಮಗ್ರ ಸಮೀಕ್ಷೆ ನಡೆಯಲಿ, ಹೊಲಯ ಮತ್ತು ಮಾದಿಗ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಕಲ್ಪಿಸಲಿ, ಸುಪ್ರೀಂ ಕೋರ್ಟ್ ಈಗಾಗಲೇ ಪರಿಶಿಷ್ಟ ಜಾತಿಗೆ ಸೂಕ್ತ ಪ್ರಾತಿನಿಧ್ಯ ಸಿಗದ ಹಿನ್ನಲೆಯಲ್ಲಿ ಷರತ್ತು ವಿಧಿಸಿ ಸಂಪೂರ್ಣ ಅಂಕಿ ಅಂಶ ಒಳಗೊಂಡ ಜಾತಿಗಣತಿ ಕಾರ್ಯ ನಡೆಯಬೇಕೆಂದು ಸೂಚನೆ ನೀಡಿದೆ, ಅದರಂತೆ ರಾಜ್ಯ ಸರ್ಕಾರ ಪಾರದರ್ಶಕವಾಗಿ ಜಾತಿಗಣತಿ ಸಮೀಕ್ಷೆ ಮಾಡಬೇಕು ಎಂದು ತಿಳಿಸಿದರು.
ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ(ಪಾಪು) ಮಾತನಾಡಿ, ಮಾದಿಗ ಸಮುದಾಯ ಒಳ ಮೀಸಲಾತಿ ಕೇಳುವ ವೇಳೆ ಹೊಲಯ ಸಮುದಾಯದ ಗಣ್ಯರನ್ನು ಲಘುವಾಗಿ ಟೀಕಿಸಿರುವ ವಕೀಲ ಅರುಣ್ ಕುಮಾರ್ ಮತ್ತು ಭಾಸ್ಕರ್ ಪ್ರಸಾದ್ ಅವರ ಹೇಳಿಕೆಯನ್ನು ಸಭೆಯಲ್ಲಿ ಖಂಡಿಸಿರುವುದಾಗಿ ಖಂಡನಾ ನಿರ್ಣಯ ಮೂಲಕ ವ್ಯಕ್ತಪಡಿಸಲಾಯಿತು.
ಹೊಲಯ ಎಂದರೆ ಭೂಮಿಯ ಒಡೆಯ, ಇದು ಒಂದು ಶ್ರೇಷ್ಠ ಪದವಾಗಿದೆ. ಹೀಗಾಗಿ ಪ್ರತಿಯೊಬ್ಬ ಹೊಲಯ ಸಮುದಾಯದವರು ಸ್ವಾಭಿಮಾನದಿಂದ ಜಾತಿಗಣತಿ ಕಾರ್ಯದಲ್ಲಿ ಹೊಲಯ ಎಂದು ನಮೂದಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉರಿಲಿಂಗಿ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ, ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕರಾದ ಜಿ.ಎನ್. ನಂಜುಂಡಸ್ವಾಮಿ, ಎಸ್.ಬಾಲರಾಜು, ಜಿ.ಪಂ.ಮಾಜಿ ಉಪಾಧ್ಯಕ್ಷ ಶಿವಕುಮಾರ್,
ಮಾಜಿ ಜಿ.ಪಂ.ಸದಸ್ಯರಾದ ಎ.ಆರ್.ಬಾಲರಾಜು, ಕಮಲ್ ಎನ್ ನಾಗರಾಜು, ತಾ.ಪಂ. ಮಾಜಿ ಸದಸ್ಯ ಆರ್.ಮಹದೇವು, ನಲ್ಲೂರು ಸೋಮೇಶ್ವರ, ಮಹಾದೇವಸ್ವಾಮಿ ಸೇರಿದಂತೆ ಇತರರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ