ವಿಜೃಂಭಣೆಯ ಶ್ರೀಚಾಮರಾಜೇಶ್ವರ ರಥೋತ್ಸವ:ನವದಂಪತಿಗಳ ಜಾತ್ರೆಯಲ್ಲಿ ಸಂಭ್ರಮ

ಚಾಮರಾಜನಗರ: ಚಾಮರಾಜನಗರದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಚಾಮರಾಜೇಶ್ವರ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ
ಭಕ್ತರ ಹರ್ಷೋದ್ಗಾರರೊಂದಿಗೆ
ವಿಜೃಂಭಣೆಯಿಂದ ನಡೆಯಿತು.
ಗುರುವಾರ ಮಧ್ಯಾಹ್ನ ಪೂರ್ವಷಾಡ ನಕ್ಷತ್ರದಲ್ಲಿ 12.15 ಗಂಟೆಯಲ್ಲಿ ಸಲ್ಲುವ ಶುಭ ಕನ್ಯಾಲಗ್ನದಲ್ಲಿ ಉತ್ಸವ ಮೂರ್ತಿಯನ್ನು ತೇರಿನಲ್ಲಿ ಕುಳ್ಳಿರಿಸಿ ಜೈ ಕಾರ,ಮಂತ್ರಘೋಷದಿಂದ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಆಷಾಢ ಮಾಸದಲ್ಲಿ ನಡೆಯುವ ಅಪರೂಪದ ರಥೋತ್ಸವ ಇದಾಗಿದ್ದು, ನೂತನ ದಂಪತಿಗಳ ಜಾತ್ರೆ ಎಂದೇ ಇದು ಖ್ಯಾತಿ ಪಡೆದಿದೆ.

ಹೊಸದಾಗಿ ಮದುವೆಯಾದ ಗಂಡ – ಹೆಂಡತಿ ಅಷಾಢ ಮಾಸದ ಜಾತ್ರೆಯಲ್ಲಿ ಒಂದಾಗಿ ಹಣ್ಣು ಜವನ ಎಸೆಯುತ್ತಾರೆ. ಹೊಸದಾಗಿ ಮದುವೆಯಾದ ಯುವತಿ ಆಷಾಢ ಮಾಸದಲ್ಲಿ ತವರಿಗೆ ಹೋಗುವುದರಿಂದ ಈ ಜಾತ್ರೆ ನೆಪದಲ್ಲಿ ಸತಿಪತಿಗಳು ಒಂದಾಗಿ ಹಣ್ಣು ಜವನ ಎಸೆಯುವುದು ಈ ಜಾತ್ರೆಯ ವಿಶೇಷತೆ.
ಮುಮ್ಮಡಿ ಕೃಷ್ಣರಾಜ ಒಡೆಯರ್ ಆಷಾಢ ಮಾಸದಲ್ಲಿ ಜನಿಸಿದ್ದರಿಂದ ಈ ರಥೋತ್ಸವವೂ ಆಷಾಢ ಮಾಸದಲ್ಲೇ ನಡೆಯಲಿದ್ದು, ರಾಜತ್ವ ಮತ್ತು ದೈವತ್ವ ಇರುವ ವಿಶೇಷ ದೇಗುಲ ಇದಾಗಿದೆ. ರಥೋತ್ಸವ ದಿನದಂದು ಹಣ್ಣು- ಜವನ ಎಸೆದರೆ ಸಂತಾನ ಭಾಗ್ಯ, ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.

*ಶಾಸಕರಿಂದ ರಥೋತ್ಸವಕ್ಕೆ ಚಾಲನೆ* :  ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಚಾಮರಾಜೇಶ್ವರಸ್ವಾಮಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು, ರಥೋತ್ಸವಕ್ಕೆ ಚಾಲನೆ ನೀಡಿ ಶುಭಕೋರಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ, ತಹಸೀಲ್ದಾರ್ ಗಿರಿಜಾ, ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಜಶೇಖರ್ ಇತರರು ಹಾಜರಿದ್ದರು.

ರಥೋತ್ಸವ ದೇವಸ್ಥಾನದ ಮುಂಭಾಗದಿಂದ
ದಕ್ಷಿಣಾಭಿಮುಖವಾಗಿ ಚಲಿಸಿ ಎಸ್.ಬಿ.ಎಂ. ರಸ್ತೆಯಲ್ಲಿ ಸಾಗಿ ವೀರಭದ್ರೇಶ್ವರಸ್ವಾಮಿ ದೇವಾಲಯದ ವೃತ್ತದಿಂದ ಮಾರಮ್ಮ ದೇವಸ್ಥಾನದ ರಸ್ತೆಯ ಮೂಲಕ ಹಳೆ ತರಕಾರಿ ಮಾರುಕಟ್ಟೆ ರಸ್ತೆಯಲ್ಲಿ ಹಾದು ದೇವಸ್ಥಾನದ ಮೂಲಸ್ಥಾನ ತಲುಪಿತು.
*ಬಿಗಿ ಪೊಲೀಸ್ ಬಂದೋಬಸ್ತ್* ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು ಸ್ಥಳದಲ್ಲೇ ಚಾಮರಾಜನಗರದ ಪೊಲೀಸ್ ವರಿಷ್ಠಾಧಿಕಾರಿಗಳಾದ ಬಿ ಟಿ ಕವಿತಾ .ಎಎಸ್ಪಿ ಶಶಿಧರ್. ಡಿವೈಎಸ್ಪಿ ಲಕ್ಷ್ಮಯ್ಯ. ಧರ್ಮೇಂದ್ರ ಹಾಗೂ ಇನ್ಸ್ಪೆಕ್ಟರ್ ಸಬ್ ಇನ್ಸ್ಪೆಕ್ಟರ್ ಇಡೀ ತಂಡವೇ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿತ್ತು.
ರಥೋತ್ಸವದ ವೇಳೆ ಕಳ್ಳರ ಕೈಚಳಕ ನಡೆಯುತ್ತದೆ ಎಂದು ಕ್ರೈಂ ಸಬ್ ಇನ್ಸ್ಪೆಕ್ಟರ್ ಲೋಕೇಶ್ ಮತ್ತು ತಂಡದವರು ಮಹಿಳೆಯರಿಗೆ ತಮ್ಮ ಆಭರಣಗಳನ್ನು ಪ್ರದರ್ಶಿಸಬಾರದು ಎಂದು ಎಚ್ಚರಿಸುತ್ತಿದ್ದರು ಜಾತ್ರಾ ಸಮಯದಲ್ಲಿ ಬೇರೆ ಕಡೆ ಗಮನ ಸೆಳೆದು ಚಿನ್ನಾಭರಣವನ್ನು ಕಳ್ಳರು ಅಪಹರಿಸುತ್ತಾರೆ ಮುನ್ನೇಚ್ಚರಿಕೆಯ ಕ್ರಮವಹಿಸಬೇಕು ಎಂದು ದಾರಿ ಉದ್ದಕ್ಕೂ ಎಚ್ಚರಿಸುತ್ತಿದ್ದರು

ವರದಿ ಆರ್ ಉಮೇಶ್ ಮಲಾರಪಾಳ್ಯ