ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ್ ರೆಡ್ಡಿ ಪದ ಗ್ರಹಣ
ದೊಡ್ಡಬಳ್ಳಾಪುರ: ನಗರ,ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ತಾಲೂಕು ಮಟ್ಟದಲ್ಲೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರವನ್ನು ಜಾರಿ ಮಾಡಲಾಗಿದ್ದು, ದೊಡ್ಡಬಳ್ಳಾಪುರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾಗಿ ವಿಶ್ವನಾಥ್ ರೆಡ್ಡಿ ಇಂದು ಅಧಿಕಾರ ಸ್ವೀಕರಿಸಿದರು, ಇದೇ ವೇಳೆ ಪ್ರಾಧಿಕಾರದ 15 ಸದಸ್ಯರ ಪದಗ್ರಹಣ ಸಹ ನಡೆಯಿತು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸದಸ್ಯರು
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧಿಕಾರ ಸ್ವೀಕಾರ ಮತ್ತು ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ಕೆಪಿಸಿಸಿ ವಕ್ತಾರ ಲಕ್ಷ್ಮೀಪತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು ಸೇರಿದಂತೆ ತಾಲೂಕಿನ ಮುಖಂಡರು ಭಾಗವಹಿಸಿದರು.
ಅಧ್ಯಕ್ಷರಾದ ವಿಶ್ವನಾಥ್ ರೆಡ್ಡಿ ಮಾತನಾಡಿ, ಪ್ರಾಧಿಕಾರದ ಅಧ್ಯಕ್ಷನಾಗಲು ಶಿಫಾರಸ್ಸು ಮಾಡಿದ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹಾಗೂ ಸಾಸಲು ಹೋಬಳಿ ಮುಖಂಡರಿಗೆ ತುಂಬು ಹೃದಯದ ಧನ್ಯವಾದಗಳನ್ನ ಸಲ್ಲಿಸಿದರು. ಬಡವರು ಸ್ವಾವಲಂಬಿ ಜೀವನ ಮಾಡಲು ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡಿದೆ, ಅಸಮಾನತೆ ಮತ್ತು ಹಸಿವು ನೀಗಿಸಲು ಅನ್ನಭಾಗ್ಯ ಯೋಜನೆ ಜಾರಿ ಮಾಡಲಾಗಿದ್ದು, ಈ ಮೂಲಕ ಬಡವರು ನೆಮ್ಮದಿಯ ಬದುಕು ಕಂಡು ಕೊಂಡಿದ್ದು, ಕುಟುಂಬ ನಿರ್ವಹಣೆಯನ್ನ ಸಮರ್ಪಕ ರೀತಿಯಲ್ಲಿ ಮಾಡುತ್ತಿದ್ದಾರೆ.
ಶಕ್ತಿ ಯೋಜನೆಯಿಂದ ಮಹಿಳೆಯರು ಸರ್ಕಾರದ ನಾಲ್ಕು ನಿಗಮಗಳ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು, ಪ್ರಯಾಣಕ್ಕೆ ಖರ್ಚಾಗುತ್ತಿದ್ದ ಹಣ ಉಳಿತಾಯ ವಾಗುವುದರಿಂದ, ಉಳಿಕೆಯ ಹಣ ಕುಟುಂಬದ ನಿರ್ವಹಣೆಗೆ ಸಹಕಾರಿಯಾಗಿದೆ. ಗೃಹಲಕ್ಷ್ಮೀ ಯೋಜನೆ ಜಾರಿಯಿಂದ ಬೆಲೆ ಏರಿಕೆಯಿಂದ ಕುಟುಂಬ ನಿರ್ವಹಣೆಗೆ ಕಷ್ಟಪಡುತ್ತಿದ್ದ ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಹಣ ಸಿಗುತ್ತಿದೆ.
ಗೃಹಜ್ಯೋತಿ ಯೋಜನೆಯಿಂದ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ, ಇದರಿಂದ ಕುಟುಂಬ ನಿರ್ವಹಣೆ ಸುಲಭವಾಗಿದೆ. ಯುವನಿಧಿ ಯೋಜನೆಯಿಂದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುವ ತನಕ ಪ್ರತಿ ತಿಂಗಳು ಹಣ ನೀಡಲಾಗುತ್ತಿದೆ, ಹಣದಲ್ಲಿ ಯುವಕರು ಪುಸ್ತಕ ಖರೀದಿ ಮತ್ತು ಪರೀಕ್ಷೆ ತಯಾರಿಗೆ ಸಿದ್ಧತೆ ಮಾಡಿಕೊಳ್ಳು ಬಹುದಾಗಿದೆ ಎಂದರು.
ತಾಂತ್ರಿಕ ಕಾರಣದಿಂದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಸ್ವಲ್ಪ ಹಿನ್ನಡೆಯಾಗಿದೆ, ನಮ್ಮ ಪ್ರಾಧಿಕಾರ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಕೆಲಸ ಮಾಡುವುದು, ಯೋಜನೆಗಳ ಫಲಾನುಭವಿಗಳಾಗಡ್ಲುಡಿ ನಮ್ಮ ಪ್ರಾಧಿಕಾರವನ್ನು ಸಂಪರ್ಕಿಸಿದ್ದಾರೆ ಯೋಜನೆಯ ಫಲಾನುಭವಿಗಳನ್ನಾಗಿ ಮಾಡಲಾಗುವುದು ಎಂದರು.