ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಗಮನ ಸೆಳೆದ ಮತದಾನ ಜಾಗೃತಿ ಬೀದಿನಾಟಕ

ಚಾಮರಾಜನಗರ:ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ರೋಟರಿ ಸಂಸ್ಥೆ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಮತದಾನ ಜಾಗೃತಿಗಾಗಿ ಏರ್ಪಡಿಸಲಾಗಿದ್ದ ಬೀದಿನಾಟಕ ಎಲ್ಲರ ಗಮನ ಸೆಳೆಯಿತು.

ಬೀದಿ ನಾಟಕವನ್ನು ವೀಕ್ಷಿಸಿದ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಶಿಲ್ಪಾ ನಾಗ್ ಅವರು ಮಾತನಾಡಿ ಈ ಬಾರಿ ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ರೋಟರಿ ಸಂಸ್ಥೆ-3181ರ ವತಿಯಿಂದ ನಾಲ್ಕು ಜಿಲ್ಲೆಗಳಲ್ಲಿ ಮತದಾನ ಜಾಗೃತಿಗಾಗಿ ಬೀದಿನಾಟಕ ಹಮ್ಮಿಕೊಳ್ಳಲಾಗಿದ್ದು, ಬೀದಿನಾಟಕ ಜನರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವಲ್ಲಿ ಅರ್ಥಪೂರ್ಣ, ಕ್ರೀಯಾಶೀಲ ಕಾರ್ಯಕ್ರಮವಾಗಿದೆ ಎಂದರು.

ಈ ಬಾರಿ ಮತದಾನಕ್ಕಾಗಿ ನೊಂದಾಯಿಸಿರುವ 18 ವರ್ಷ ತುಂಬಿದ ಯುವಜನರು, ಹಿರಿಯ ನಾಗರಿಕರು, ವಿಕಲಚೇತನರು, ಲಿಂಗತ್ವ ಅಲ್ಪಸಂಖ್ಯಾತರು ಎಲ್ಲರೂ ತಪ್ಪದೆ ಮತಗಟ್ಟೆ ಬಂದು ಮತ ಚಲಾಯಿಸಬೇಕು. ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾಡಳಿತವು ಸಹ ಅನೇಕ ಜಾಗೃತಿ ಕಾರ್ಯಕ್ರಮಗಳ ಮೂಲಕ ಉತ್ತೇಜನ ನೀಡುತ್ತಿದೆ. ಜಿಲ್ಲಾ ಸ್ವೀಪ್ ಸಮಿತಿಯು ಸಹ ಜಿಲ್ಲೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಶೇ. 75.5ರಷ್ಟು ಮತದಾನವಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಎಲ್ಲರೂ ತಪ್ಪದೆ ಕಡ್ಡಾಯವಾಗಿ ಹಾಗೂ ನೈತಿಕ ಮತದಾನ ಮಾಡಬೇಕು. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆಯ ಜಾಗೃತಿ ಚಟುವಟಿಕೆಗಳು ಶ್ಲಾಘನೀಯವಾಗಿವೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.

ರೋಟರಿ ಸಂಸ್ಥೆಯ ಉಸ್ತುವಾರಿ ವಿಶ್ವ ಶೆಣೈ ಅವರು ಮಾತನಾಡಿ ರೋಟರಿ 3181 ಸಂಸ್ಥೆಯ ಪಬ್ಲಿಕ್ ಇಮೇಜ್ ರಿಂಗ್ ನೇತೃತ್ವದಲ್ಲಿ ರಸ್ತೆ ಸುರಕ್ಷತೆ ಹಾಗೂ ಮತದಾನ ಜಾಗೃತಿ ಮೂಡಿಸಲು ಬೀದಿನಾಟಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೆಲವೆಡೆ ಮತದಾನ ಜಾಗೃತಿಗಾಗಿ ರ್ಯಾಲಿಗಳನ್ನು ಏರ್ಪಡಿಸಲಾಗಿದೆ ಎಂದರು.

ಈಗಾಗಲೇ ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಮತದಾನ ಜಾಗೃತಿ ಮೂಡಿಸುವ ಬೀದಿ ನಾಟಕ ನಡೆಸಿಕೊಡಲಾಗಿದೆ. ಮತದಾನವನ್ನು ಯಾಕೆ ಮಾಡಬೇಕು? ಯಾವ ರೀತಿ ಮಾಡಬೇಕು ಎಂಬ ಬಗ್ಗೆ ಜನ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿಯೊಬ್ಬ ಮತದಾರನನ್ನು ತಲುಪುವುದೇ ಬೀದಿನಾಟಕ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ರೋಟರಿ ಸಂಸ್ಥೆಯ ಉಸ್ತುವಾರಿ ವಿಶ್ವ ಶೆಣೈ ಅವರು ತಿಳಿಸಿದರು.

ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ರೋಟರಿ ಸಂಸ್ಥೆಯ ಕಿರಣ್ ರಾಬರ್ಟ್, ಅಧಿಕಾರಿಗಳು, ಇತರರು ಇದ್ದರು.

ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮಕ್ಕೂ ಮೊದಲು ರೋಟರಿ ಸಂಸ್ಥೆಯ ತಂಡದವರು ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಬೀದಿನಾಟಕದ ಮೂಲಕ ಮತದಾನದ ಅರಿವು ಮೂಡಿಸಿದರು.

ವರದಿ ಆರ್ ಉಮೇಶ್ ಮಲಾರಪಾಳ್ಯ