ಬಿರುಗಾಳಿ ಮಳೆಗೆ ನೆಲಕಚ್ಚಿದ ಬಾಳೆ, ಹೀರೆಕಾಯಿ ಬೆಳೆ…!

ದೊಡ್ಡಬಳ್ಳಾಪುರ: ಶನಿವಾರ ರಾತ್ರಿ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹಾದ್ರಿಪುರ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ಸುರಿದ ಬಾರಿ ಬಿರುಗಾಳಿ ಮಳೆಗೆ ಬೆಳೆಗಳು ನೆಲಕಚ್ಚಿವೆ.

ಹಾದ್ರಿಪುರ ಗ್ರಾಮದ ಸುಧಾಕರ್, ನಂಜೇಗೌಡ, ಮಂಜುನಾಥ, ಜಯರಾಮಯ್ಯ, ದೇವರಾಜಪ್ಪ, ಎಂಬ ರೈತರಿಗೆ ಸೇರಿದ ಬಾಳೆ ಗಿಡಗಳು, ಚೆನ್ನರಾಯಪ್ಪ ಅವರು 1 ಎಕರೆಯಲ್ಲಿ ಬೆಳೆದಿದ್ದ ಹೀರೆಗಿಡದ ಚಪ್ಪರ ನೆಲಕ್ಕುರುಳಿದೆ.

ಅಲ್ಲದೇ ಗ್ರಾಮದ ಸುತ್ತಮುತ್ತ ಅಡಿಕೆ ಮರಗಳು ಕೂಡ ನೆಲಕ್ಕೆ ಉರುಳಿವೆ‌. ಬಾಳೆ‌ ಹಾಗೂ ಹೀರೆಗಿಡ ಬೆಳೆ ಕಟಾವಿಗೆ ಬಂದಿತ್ತು. ಬಾಳೆ ಹಾಗೂ ಅಡಿಕೆ ಇನ್ನೊಂದು ತಿಂಗಳಲ್ಲಿ ಕಟಾವು ಮಾಡಬೇಕಿತ್ತು. ಆದರೆ, ಅಕಾಲಿಕ ಮಳೆಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ರೈತರ ಪರಿಸ್ಥಿತಿ.

ಸುಮಾರು ಎಂಟು‌ ಎಕರೆ ಪ್ರದೇಶದಲ್ಲಿ ಬೆಳೆಗಳು ನಾಶವಾಗಿವೆ. ಐದು ಲಕ್ಷ ಖರ್ಚು ಮಾಡಿ ಬಾಳೆ, ಹೀರೆಕಾಯಿ ಬೆಳೆ ಬೆಳೆಯಲಾಗಿತ್ತು. ಈಗ ಬೆಳೆ ನಾಶವಾದ ಹಿನ್ನೆಲೆಯಲ್ಲಿ 15 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ‌ ಎಂದು ರೈತರು ಅಳಲು ತೋಡಿಕೊಂಡಿದ್ದು, ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.