ಅಂತರರಾಷ್ಟ್ರೀಯ ವಿಶ್ವ ಕಾರ್ಮಿಕ ದಿನದ ಆಚರಣೆ : ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಕಟ್ಟಡ ಕಾರ್ಮಿಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

*ದೊಡ್ಡಬಳ್ಳಾಪುರ ಮೇ 01 : ಪ್ರಸ್ತುತ ಸಮಾಜದಲ್ಲಿ ಕಾರ್ಮಿಕರ ಹಕ್ಕುಗಳನ್ನು ಕಸಿಯುವ ಹುನ್ನಾರ ನೆಡೆಯುತ್ತಿದೆ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಿ ಅವರ ಜೊತೆಗೆ ನಿಲ್ಲಬೇಕಾದ ಸರ್ಕಾರಗಳು ಬಂಡವಾಳಶಾಹಿಗಳ ಜೊತೆ ನಿಂತಿರುವುದು ವಿಪರ್ಯಾಸವೇ ಸರಿ ಎಂದು ಹಿರಿಯ ನ್ಯಾಯವಾದಿಗಳಾದ ಎಂ ಕೃಷ್ಣಮೂರ್ತಿ ತಿಳಿಸಿದರು

ನಗರದ ಕನ್ನಡ ಜಾಗೃತ ಭವನದಲ್ಲಿ ಶ್ರೀ ನೆಲದ ಆಂಜನೇಯ ಸ್ವಾಮಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಹಾಗೂ ಮೇಸ್ತ್ರಿಗಳ ಸಂಘ, ಕನ್ನಡ ಜಾಗೃತ ಪರಿಷತ್ ದೊಡ್ಡಬಳ್ಳಾಪುರ ಹಾಗೂ ಭಾಗ್ಯವಿಧಾತ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಸಹಯೋಗದೊಂದಿಗೆ ಆಯೋಜನೆ ಮಾಡಲಾಗಿದ್ದ ಅಂತಾರಾಷ್ಟ್ರೀಯ ವಿಶ್ವ ಕಾರ್ಮಿಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ದೇಶದಲ್ಲಿ ಕಾರ್ಮಿಕರು ಇಂದಿಗೂ ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿದ್ದು ಕಾರ್ಮಿಕರ ಜೀವನ ಸುಧಾರಿಸಲು ಕನಿಷ್ಠ ವೇತನ ಪದ್ಧತಿ ಜಾರಿಯಾಗಬೇಕಿದೆ ವೇತನ ನಿರ್ಧರಿಸುವ ಮಾನದಂಡಗಳನ್ನು ಕುರಿತು ಮಾಲೀಕರಿಗೆ ಅರಿವಿನ ಅವಶ್ಯಕತೆ ಇದೆ.

ಪ್ರಸ್ತುತ ಕಾರ್ಮಿಕರಿಗೆ ದೊರೆಯುತ್ತಿರುವ ಸೌಲಭ್ಯಗಳು ಸಾವಿರಾರು ಕಾರ್ಯಕರ್ತರ ನಿರಂತರ ಹೋರಾಟಗಳ ಫಲವಾಗಿದೆ. ನಮ್ಮಲ್ಲಿ ಸಂಘಟಿತ ಹಾಗೂ ಅಸಂಘಟಿತ ಎಂಬ ಎರಡು ವಲಯಗಳ ಕಾರ್ಮಿಕರಿದ್ದಾರೆ. ಆದರೆ ಎರಡು ವಲಯದ ಕಾರ್ಮಿಕರಿಗೆ ಸೂಕ್ತ ಭದ್ರತೆಯ ಕೊರತೆ ಇದೆ ಎಂಬುದನ್ನು ಸರ್ಕಾರಗಳು ಅರಿಯಬೇಕಿದೆ ಎಂದರು.

ನಿವೃತ್ತ ಪ್ರಧ್ಯಾಪಕರು ಹಾಗೂ ಸಂಘದ ಸಂಸ್ಥಾಪಕ ಸಲಹೆಗಾರ ಪ್ರೊಫೆಸರ್ ಚಂದ್ರಪ್ಪ ಮಾತನಾಡಿ ರಾಷ್ಟ್ರೀಯ ಅಂಕಿ ಅಂಶಗಳ ಕಛೇರಿ ನಡೆಸಿರುವ ಸಮೀಕ್ಷೆ ಪ್ರಕಾರ ದೇಶದಲ್ಲಿ 38 ಕೋಟಿಗಿಂತ ಅಧಿಕ ಅಸಂಘಟಿತ ಕಾರ್ಮಿಕ ವರ್ಗದವರಿದ್ದಾರೆ. ಅವರಿಗೆ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆಗಳನ್ನು ಪಡೆಯಲು ವಿಶೇಷ ಕಾರ್ಮಿಕ ನೀತಿಗಳಿವೆ. ಅವರೆಲ್ಲರೂ (ಇ) ಪೋರ್ಟಲ್‌ನಲ್ಲಿ ದಾಖಲಿಸಿಕೊಳ್ಳುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಸರ್ಕಾರಗಳು ಕಾರ್ಮಿಕರ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಬೇಕಿದೆ ಎಂದರು.

ಸಂಘದ ಅಧ್ಯಕ್ಷ ಅರವಿಂದ್ ಶಂಕರೇಗೌಡ ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಲ್ಲಿ ಹನ್ನೊಂದು ವರ್ಗಗಳ ಕಾರ್ಮಿಕರನ್ನು ಗುರುತಿಸಿ ಸ್ಮಾರ್ಟ್ ಕಾರ್ಡ್ ಮತ್ತು (ಇ ಶ್ರಮ್) ಕಾರ್ಡ್ ನೀಡಲಾಗುತ್ತಿದೆ. ಆದರೆ ಈ ಅಸಂಘಟಿತರಿಗೆ ಸರಿಯಾದ ಮಾರ್ಗದರ್ಶನ ಸಿಗುತ್ತಿಲ್ಲ. ನಮ್ಮ ಸಂಘವು ಇವರ ಹಿತಕ್ಕಾಗಿ ಕಳೆದ 12 ವರ್ಷಗಳಿಂದ ಸತತವಾಗಿ ಶ್ರಮಿಸುತ್ತಿದೆ. ಅವರಿಗೆ ಗುರುತಿನ ಚೀಟಿ ಮಾಡಿಸಿಕೊಡುವುದು. ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸಿಗುವ ಹಲವಾರು ಸೌಲಭ್ಯಗಳನ್ನು ಒದಗಿಸಿಕೊಡುವುದು. ಕಟ್ಟಡ ಮತ್ತು ಇತರೆ ಕಾರ್ಮಿಕರ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ ಮತ್ತು ಪ್ರತಿಭಾ ಪುರಸ್ಕಾರ, ಹಿರಿಯ ಕಾರ್ಮಿಕರಿಗೆ ಗೌರವ ಸಮರ್ಪಣೆ, ರಕ್ತದಾನ ಶಿಬಿರ, ಪ್ರತಿ ವರ್ಷ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಕಾರ್ಮಿಕರ ಸಮಸ್ಯೆಗಳಿಗೆ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಚ್. ಎಂ.ಜಗದೀಶ್ ಮಾತನಾಡಿ ಈ ವರ್ಷವೂ ಮೇ 1 ರಂದು ಕಾರ್ಮಿಕರ ದಿನಾಚರಣೆಯನ್ನು ಆಚರಿಸುವುದರ ಜೊತೆ ಜೊತೆಗೆ 8,9,10ನೇ ತರಗತಿ ಮಕ್ಕಳಿಗೆ ಬೇಸಿಗೆ ಶಿಬಿರ ಏರ್ಪಡಿಸುವುರ ಮೂಲಕ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

*ಕಟ್ಟಡ ಕಾರ್ಮಿಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ*

ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತ್ಯಂತ ಹೆಚ್ಚಿನ ಅಂಕ ಪಡೆದ ಕಟ್ಟಡ ಕಾರ್ಮಿಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

*ಪ್ರತಿಭಾ ಪುರಸ್ಕಾರಕ್ಕೆ ಭಾಜನರಾದ ವಿದ್ಯಾರ್ಥಿಗಳು*

ಲಾವಣ್ಯ 83%,ಇಂದ್ರಜಾ 91%, ಮನುಷ್ಯ ಎಂ 82%,ಶ್ವೇತಾ ಬಿ ಎನ್ 78%, ಭರತ್ ಕುಮಾರ್ ಸಿಎನ್ 79%.

*ಹಿರಿಯ ಕಾರ್ಮಿಕರಿಗೆ ಗೌರವ ಸಮರ್ಪಣೆ*

ಕಾರ್ಯಕ್ರಮದಲ್ಲಿ ವಿಶೇಷವಾಗಿ ಹಲವಾರು ವರ್ಷಗಳಿಂದ ಕಾರ್ಮಿಕರಾಗಿ ಶ್ರಮಿಸುತ್ತಿರುವ ಮುನಿಶಾಮಣ್ಣ, ರಾಮಣ್ಣ, ಪಾಪಣ್ಣ, ರಂಗಮ್ಮ,ಚಿನ್ನಪ್ಪ, ಬಿ ಎಲ್ ರಾಮಕೃಷ್ಣ,ಕೆ ಪಿ ಶ್ರೀನಿವಾಸ್, ಸಿ ಮುನಿರಾಜು, ಸೇರಿದಂತೆ ಹಲವು ಹಿರಿಯ ಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಕೆ. ವೆಂಕಟೇಶ್, ಎಚ್. ಕೆ ಆನಂದ್ ಕುಮಾರ್, ವಕೀಲರಾದ ಸುರೇಶ್ ಕುಮಾರ್, ಸಂಘದ ಉಪಾಧ್ಯಕ್ಷ ಎಂ ಮಲ್ಲೇಶ್, ಖಜಾಂಚಿ ಸಿ. ಸತೀಶ್, ಸಂಘಟನಾ ಕಾರ್ಯದರ್ಶಿ ಆರ್. ರುದ್ರಮೂರ್ತಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಮುನ್ನಾವರ್,ರಾಜಾ ರಾಮ್,ಮಂಜುನಾಥ್,ಗೋಪಾಲ್,ನಂಜೇಗೌಡ,ಆಂತೋನಿ,ಅಂಬರೀಶ್, ಪ್ರವೀಣ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.