ನಕಾಶೆ ರಸ್ತೆ ವಿಚಾರವಾಗಿ ಜಗಳ 50ಕ್ಕೂ ಹೆಚ್ಚು ಅಡಿಕೆ ಗಿಡಗಳು ಬಲಿ

ದೊಡ್ಡಬಳ್ಳಾಪುರ: ನಕಾಶೆ ರಸ್ತೆ ವಿಚಾರವಾಗಿ ಎರಡು ಕುಟುಂಬಗಳ ನಡುವಿನ ಹಳೆಯ ದ್ವೇಷ, ಎರಡು ವರ್ಷದ ಅಡಿಕೆ ಗಿಡಗಳ ನಾಶಕ್ಕೆ ಕಾರಣವಾಗಿದೆ.

ತಾಲೂಕಿನ ಸಾಸಲು ಹೋಬಳಿಯ ಗಾಣದಾಳ ಗ್ರಾಮದ ಶಿವಶಂಕರ್ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಅಡಿಕೆ ಗಿಡಗಳ ಪೈಕಿ 50 ಕ್ಕೂ ಹೆಚ್ಚು ಗಿಡಗಳನ್ನು ಅದೇ ಗ್ರಾಮದ ಮಂಜುನಾಥ ಎಂಬಾತ ಕಡಿದು ಹಾಕಿದ್ದಾನೆ ಎಂದು ಶಿವಶಂಕರ್ ಕುಟುಂಬಸ್ಥರು ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.

ಘಟನೆ ವಿವರ

ಗಾಣದಾಳ ಗ್ರಾಮದ ಹಳ್ಳದ ಬಳಿ ಶಿವಶಂಕರ್ ಎಂಬುವರು ಸರ್ವೇ ನಂ.8/1 ರಲ್ಲಿ 29 ಗುಂಟೆ ಜಮೀನನ್ನು ರಾಮಕ್ಕ ಎಂಬುವರಿಂದ ಕ್ರಯ ಮಾಡಿಸಿಕೊಂಡಿದ್ದರು. ಜಮೀನು ಪಕ್ಕದಲ್ಲೇ ನಕಾಶೆ ದಾರಿ ವಿಚಾರವಾಗಿ ಅದೇ ಗ್ರಾಮದ ಮಂಜುನಾಥ ಹಾಗೂ ಶಿವಶಂಕರ್ ಕುಟುಂಬದ ಮಧ್ಯೆ ಜಗಳ ನಡೆದಿತ್ತು. ಆದರೂ ನಕಾಶೆಯಲ್ಲಿದ್ದಂತೆ ಗ್ರಾ. ಪಂ ವತಿಯಿಂದ ಶಿವಶಂಕರ್ ಅವರು ರಸ್ತೆ ಮಾಡಿಸಿಕೊಂಡಿದ್ದರು. ಇಲ್ಲಿನ ಜಮೀನಿಗೆ ಒಂದು ಕಿ.ಮೀ.ದೂರದಿಂದ ಪೈಪ್ ಲೈನ್ ಮೂಲಕ ನೀರು ತಂದು ಎರಡು ವರ್ಷದ ಹಿಂದೆ ಅಡಿಕೆ ಸಸಿಗಳನ್ನು ನಾಟಿ ಮಾಡಿದ್ದರು.

ಸೋಮವಾರ ಸಂಜೆ 6.45ರ ಸುಮಾರಿಗೆ ಮಂಜುನಾಥ ನಮ್ಮ ಅಡಿಕೆ ತೋಟದ ಕಡೆಯಿಂದ ಕುಡುಗೋಲು ಹಿಡಿದು ಬರುತ್ತಿದ್ದ ಮೇವಿಗೆ ಹೋಗಿ ಬರುತ್ತಿರಬಹುದು ಎಂದು ಸುಮ್ಮನಾದೆ. ಮಂಗಳವಾರ ಬೆಳಿಗ್ಗೆ 9 ಗಂಟೆ ಹೊತ್ತುಗೆ ನೀರು ಹಾಯಿಸಲು ತೋಟದ ಕಡೆ ಬಂದು ನೋಡಿದಾಗ ಅಡಿಕೆ ಗಿಡಗಳನ್ನು ಕಡಿದು ಹಾಕಿರುವುದು ಬೆಳಕಿಗೆ ಬಂದಿತು. ಮಂಜುನಾಥನೇ ಅಡಿಕೆ ಗಿಡಗಳನ್ನು ಕಡಿದು ಹಾಕಿರಬಹುದು ಎಂಬ ಅನುಮಾನದ ಹಿನ್ನೆಲೆ ದೂರು ನೀಡಿದ್ದೇನೆ ಎಂದು ಶಿವಶಂಕರ್ ತಿಳಿಸಿದರು. ಶಿವಶಂಕರ್ ಅವರ ತಾಯಿ ನರಸಮ್ಮ ಮಾತನಾಡಿ, ವಡವೆ ಅಡವಿಟ್ಟು ಐದು ಲಕ್ಷ ಸಾಲ ತಂದು ಅಡಿಕೆ ಬೆಳೆ ಬೆಳೆದಿದ್ದೆವು. ಮಂಜುನಾಥ, ನವೀನ ಅವರು ಸಣ್ಣ ಅಡಿಕೆ ಗಿಡಗಳನ್ನೇ ಕಡಿದು ನಾಶ ಮಾಡಿದ್ದಾರೆ. ನಮ್ಮಮಧ್ಯೆ ಏನೇ ಭಿನ್ನಾಭಿಪ್ರಾಯ ಇದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು. ಆದರೆ, ಜೀವನಕ್ಕೆ ಆಧಾರವಾಗಿದ್ದ ಅಡಿಕೆ ಸಸಿಗಳನ್ನೇ ಕತ್ತರಿಸಿ ಹಾಳು ಮಾಡಿದ್ದಾರೆ. ನಮಗೆ ನ್ಯಾಯದ ಜೊತೆ ರಕ್ಷಣೆ ಬೇಕು ಎಂದು ಅಳಲು ತೋಡಿಕೊಂಡರು. ದೂರು, ಪ್ರತಿದೂರು ದಾಖಲು ಅಡಿಕೆ ಸಸಿಗಳನ್ನು ಕಡಿದು ನಾಶ ಮಾಡಿದ್ದಲ್ಲದೇ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ ಆರೋಪದ ಮೇಲೆ ಜಯಮ್ಮ ಮುತ್ತಯ್ಯ

ಮಂಜುನಾಥ ನವೀನ್ ಕುಮಾರ್, ಹಾಗೂ ಚಿನ್ನಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಜುನಾಥ ಅವರು ಕೂಡ ಪ್ರತಿದೂರು ನೀಡಿದ್ದು ಮಾಂಗಲ್ಯ ಸರ ಕಿತ್ತುಹಾಕಿ ಹಲ್ಲೆ ನಡೆಸಿದ ಆರೋಪದಡಿ ಶಿವಶಂಕರ್, ನರಸಮ್ಮ ಇತರರ ವಿರುದ್ಧ ದೂರು ದಾಖಲಾಗಿದೆ.