ಕಾಮಗಾರಿ ಪೂರ್ಣಗೊಂಡು 2 ವರ್ಷಗಳಾದರು ಲೋಕಾರ್ಪಣೆಗೊಳ್ಳದ ದೊಡ್ಡಬಳ್ಳಾಪುರ ಇ ಎಸ್ ಐ ಆಸ್ಪತ್ರೆ.

ದೊಡ್ಡಬಳ್ಳಾಪುರ: ಮೇ 1 ಕಾರ್ಮಿಕರ ದಿನ. ಆದರೆ, ಕಾರ್ಮಿಕರ ದಿನ ಕೇವಲ ಆಚರಣೆಗಷ್ಟೇ ಸೀಮಿತವಾಗಿದೆಯೇ ಹೊರತು ಕಾರ್ಮಿಕರ ಬವಣೆಗೆ ಮುಕ್ತಿ ದೊರಯದಿರುವುದೇ ವಿಪರ್ಯಾಸ.

ಏಷ್ಯಾದ 2 ನೇ ಅತಿ ದೊಡ್ಡ ಕೈಗಾರಿಕಾ ಪ್ರದೇಶವಾದ ದೊಡ್ಡಬಳ್ಳಾಪುರ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ವಿವಿಧ ಹಂತಗಳ ಕೈಗಾರಿಕಾ ಪ್ರದೇಶದ ಇಎಸ್ಐ ವ್ಯಾಪ್ತಿಗೆ ಬರುವ ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಹಗಲಿರುಳು ದುಡಿಯುತ್ತಿದ್ದಾರೆ.

ಆದರೆ ಈ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ, ಕನಿಷ್ಠ ವೇತನ, ಕೆಲಸದ ಅವಧಿ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿವೆ.

 

2013 ಜೂನ್ 9 ರಂದು ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಇಎಸ್‌ಐ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಅಂದಿನ ಕಾರ್ಮಿಕ‌ ಸಚಿವ ಮಲ್ಲಿಕಾರ್ಜುನ ಖರ್ಗೆ, ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯಿಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು.

ಒಟ್ಟು 17,910 ಚ.ಮೀ ವಿಸ್ತೀರ್ಣದಲ್ಲಿ ಅಂದಾಜು ₹ 98 ಕೋಟಿ ವೆಚ್ಚದಲ್ಲಿ ಒಳರೋಗಿ ಮತ್ತು ಹೊರರೋಗಿ ವಿಭಾಗ ಒಳಗೊಂಡ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ‌ ಚಾಲನೆ ನೀಡಲಾಯಿತು.

ಆಸ್ಪತ್ರೆ ಕಟ್ಟಡ ಕಾಮಗಾರಿ 2022ರಲ್ಲಿ ಪೂರ್ಣಗೊಂಡಿದೆ. ವಿಪರ್ಯಾಸವೆಂದರೆ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಎರಡು ವರ್ಷವಾದರೂ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡದೇ ಸಾವಿರಾರು ಕಾರ್ಮಿಕರಿಗೆ ಅನ್ಯಾಯ ಮಾಡಲಾಗಿದೆ.

ಇಎಸ್ಐ ಆಸ್ಪತ್ರೆ ಕಟ್ಟಡ ಸುಸಜ್ಜಿತವಾಗಿ ನಿರ್ಮಾಣವಾಗಿದ್ದು, ಅಗತ್ಯ ಮೂಲಸೌಕರ್ಯ, ಪೀಠೋಪಕರಣ ಒದಗಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ಉದ್ಘಾಟನಾ ಭಾಗ್ಯ ಕಾಣದೇ ಎರಡು ವರ್ಷದಿಂದ ದೂಳು ತಿನ್ನುತ್ತಿದೆ.

ಇಎಸ್ಐ ವ್ಯಾಪ್ತಿಗೆ ಒಳಪಡುವ ಕಾರ್ಮಿಕರು‌ ಸಣ್ಣಪುಟ್ಟ ಕಾಯಿಲೆಗಳಿಗೂ ಬೆಂಗಳೂರು ಇಎಸ್ಐ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾಗಿ

ನಿಲ್ಲದ ಕಾರ್ಮಿಕರ ಶೋಷಣೆ:

ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ ದುಡಿಯುತ್ತಿರುವ ಬಹುತೇಕ ಕಾರ್ಮಿಕರಿಗೆ ಕನಿಷ್ಠ ವೇತನ ನೀಡದೇ ಶೋಷಣೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ವೇತನ ತಾರತಮ್ಯ, ಮಹಿಳೆಯರಿಗೆ ಮಾನಸಿಕ, ದೈಹಿಕ ಹಾಗೂ ಲೈಂಗಿಕ ಕಿರುಕುಳ, ಕೆಲಸದ ಸ್ಥಳದಲ್ಲಿ ಶೋಷಣೆ ಸೇರಿದಂತೆ ಹಲವು ಹತ್ತು‌ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸಂಬಂಧ ಪಟ್ಟ ಕಾರ್ಮಿಕ ಇಲಾಖೆಗೆ ದೂರು ಬಂದರೆ ಮಾತ್ರವೇ ಸ್ಪಂದಿಸುವುದಾಗಿ ತಿಳಿಸುತ್ತಾರೆ.

ಇನ್ನೂ ಕಾರ್ಖಾನೆ ಇಲಾಖೆಯು ಕಾರ್ಮಿಕರ ಪರವಾಗಿ ಸ್ಪಂದಿಸದಿರುವುದು ದುರದೃಷ್ಟಕರವಾಗಿದೆ. ಎಷ್ಟೋ ಅಮಾಯಕ ಕಾರ್ಮಿಕರ ಮಾರಣಹೋಮ ನಡೆಯುತ್ತಿದೆ,

ಬಹುರಾಷ್ಟ್ರೀಯ ಕಂಪೆನಿಗಳು ಅಧಿಕಾರಿಗಳನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ಕೆಐಎಡಿಬಿ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ, ತಮಗೆ ಬೇಕಾದ ರೀತಿಯಲ್ಲಿ ಈ ನೆಲದ ಕಾನೂನು ಹಾಗೂ ನಿಯಮಗಳನ್ನು ಬಳಕೆ ಮಾಡಿಕೊಂಡು ಬಡಕಾರ್ಮಿಕರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಶೋಷಣೆ ಜಗದ ನಿಯಮ ಎಂಬ ಪರಿಸ್ಥಿತಿ ನಿರ್ಮಾಣ ವಾಗಿರುವುದು ಸತ್ಯ.