ಲೈಂಗಿಕ ದೌರ್ಜನ್ಯ ಪ್ರಕರಣ | ತಪ್ಪಿತಸ್ಥರಿಗೆ ಕಠಿಣ ನೀಡಲು ಒತ್ತಾಯಿಸಿ KRS ಪಕ್ಷದಿಂದ ಮೇ 13ಕ್ಕೆ ಹಾಸನ ಚಲೋ..!
ದೊಡ್ಡಬಳ್ಳಾಪುರ : ಇದೇ ಮೇ 13 ರ ಸೋಮವಾರ ಪೆನ್ ಡ್ರೈವ್ ಪ್ರಕರಣ ಕುರಿತಂತೆ ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ವತಿಯಿಂದ ‘ ಸಂತ್ರಸ್ತ ಮಹಿಳೆಯರಿಗೆ ದೈರ್ಯ ತುಂಬಲು ಹಾಗೂ ಲೈಂಗಿಕ ಹಗರಣ ಪ್ರಕರಣವನ್ನು ಪಾರದರ್ಶಕವಾಗಿ ನಡೆಸಲು ಒತ್ತಾಯಿಸಿ ಹಾಸನ ಚಲೋ ‘ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಪಕ್ಷದ ಜಿಲ್ಲಾ ಅಧ್ಯಕ್ಷ ಶಿವಶಂಕರ್ ಹೇಳಿದರು.
ನಗರದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು
ಕಳೆದ ಹಲವಾರು ದಿನಗಳಿಂದ ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣ ಕುರಿತಾದ ಪೆನ್ ಡ್ರೈವ್ ಪ್ರಕರಣ ಬಾರಿ ಚರ್ಚೆಗೆ ಗುರಿಯಾಗಿದ್ದು. ಈ ಕುರಿತು ರಾಜಕೀಯ ಪಕ್ಷಗಳು ಒಬ್ಬರ ಮೇಲೆ ಒಬ್ಬರು ಕೆಸರು ಎರಚಿಕೊಳ್ಳುತ್ತಿದ್ದಾರೆ. ಪ್ರಕರಣ ಸಾವಿರಾರು ಹೆಣ್ಣು ಮಕ್ಕಳ ಜೀವ, ಜೀವನ ಹಾಗೂ ಘನತೆಯ ವಿಷಯವಾಗಿದ್ದು. ಈ ಪ್ರಕರಣವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ, ರಾಜ್ಯ ಸರ್ಕಾರ ನೇಮಿಸಿರುವ ಎಸ್ ಐ ಟಿ ತನಿಖಾತಂಡ ಈಗಾಗಲೇ ವಿಚಾರಣೆ ಕೈಗೆತ್ತಿಕೊಂಡಿದ್ದು . ಸತ್ಯ ಸತ್ಯತೆ ಹೊರ ಬಿಡಬೇಕಿದೆ, ತಪ್ಪು ಮಾಡಿ ತಲೆ ಮರೆಸಿಕೊಂಡಿರುವ ರಾಜಕಾರಣಿಯನ್ನು ಕೂಡಲೇ ಕಾನೂನು ಕ್ರಮಕ್ಕೆ ಒಳಪಡಿಸಬೇಕಿದೆ ಈ ಮೂಲಕ ದೇಶದ ಜನಸಾಮಾನ್ಯರಿಗೆ ಕಾನೂನಿನ ಬಗ್ಗೆ ಉತ್ತಮ ಭಾವನೆ ಹಾಗೂ ಅಚಲನಂಬಿಕೆ ಮೂಡಿಸಬೇಕಾದ ಅವಶ್ಯಕತೆ ಇದೆ ಎಂದರು.
ರಾಜಕೀಯ ಪಕ್ಷಗಳು ಪೆನ್ಡ್ರೈವ್ ಪ್ರಕರಣವನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ಕರ್ಮಕಾಂಡ, ಬಿಡುಗಡೆ ಮಾಡಿದವರೇ ತಪ್ಪಿತಸ್ಥ ಎಂದು ಹೇಳುತ್ತಾರೆ. ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದವನು ದೊಡ್ಡ ತಪ್ಪಿತಸ್ಥ ಎಂದ ಅವರು, ತಪ್ಪು ಮಾಡಿದವನು ತಲೆ ಮರೆಸಿಕೊಂಡಿದ್ದಾನೆ. ಒಂದೇಕಡೆ ಹಣ ಸೇರಿದಂತೆ ಮನುಷ್ಯನ ಸ್ವಭಾವ ಬದಲಾಗುವಂತೆ ರಾಜಕೀಯ ಶಕ್ತಿ ಒಂದು ಕುಟುಂಬದಲ್ಲಿ ಕೇಂದ್ರೀಕರಣಗೊಂಡಾಗ ಇಂತಹ ಘಟನೆಗಳು ಸಾಮಾನ್ಯ ಎಂದರು.
ತಪ್ಪು ಗೊತ್ತಿದ್ದರೂ ಟಿಕೆಟ್ ಕೊಟ್ಟ ಮೈತ್ರಿ ಪಕ್ಷಗಳು :
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕುರಿತು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ಇದ್ದರೂ 2024ರ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿಯಾಗಿ ಟಿಕೆಟ್ ನೀಡಿದೆ. ಆದರೆ ಪ್ರಕರಣ ಹೊರ ಬರುತ್ತಿದ್ದಂತೆ ತಮಗೂ ಪ್ರಜ್ವಲ್ ರೇವಣ್ಣರಿಗೂ ಸಂಬಂಧವೇ ಇಲ್ಲ ಎಂಬ ರೀತಿಯಲ್ಲಿ ಬಿಜೆಪಿ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ:
ನಮ್ಮ ರಾಜ್ಯದಲ್ಲಿ ಸಾಕಷ್ಟು ತನಿಖೆಗಳು ನಡೆದಿವೆ. ಇಲ್ಲಿಯ ವರೆಗೂ ಯಾರಿಗೂ ಶಿಕ್ಷೆ ಆಗಿದ್ದನ್ನು ನಾವು ಕಂಡಿಲ್ಲ, ಅದೇ ಜನಸಾಮಾನ್ಯ ಒಬ್ಬ ತಪ್ಪು ಮಾಡಿದ್ದರೆ ಪೊಲೀಸರು ಹೇಗೆ ವರ್ತಿಸುತ್ತಾರೆ ಎಂಬುದು ನಾವು ಕಂಡಿದ್ದೇವೆ. ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ ಎಂಬ ಭಾವನೆ ಇರಬಾರದು. ನಮಗೆ ಸಾಮಾಜಿಕ ಹೊಣೆಗಾರಿಕೆ ಇರಬೇಕು ಇಂತಹ ವಿಚಾರಗಳಿಗೆ ಪ್ರತಿಕ್ರಿಯೆ ನೀಡುವುದು ನಮ್ಮ ಜವಾಬ್ದಾರಿ ಎಂದು ಕಿವಿ ಮಾತು ಹೇಳಿದರು.
ಪ್ರಜ್ವಲ್ ತಪ್ಪು ಮಾಡದೇ ಇದ್ದರೆ ನೇರವಾಗಿ ತನಿಖೆ ಎದುರಿಸಬೇಕಿತ್ತು ಒಬ್ಬ ಜನಪ್ರತಿನಿಧಿ ತಲೆ ತಪ್ಪಿಸಿಕೊಂಡಿದ್ದಾನೆ ಎಂದು ದೂರಿದರು.
ಪ್ರಜ್ವಲ್ ರೇವಣ್ಣ ಕುರಿತಾದ ಪೆನ್ ಡ್ರೈವ್ ಪ್ರಕರಣವನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಎಸ್ಐಟಿ ತನಿಖಾತಂಡದಿಂದ ಬಿಡುಗಡೆಗೊಳಿಸಿ ಕೇಂದ್ರದ ಸಿಬಿಐಗೆ ಒಪ್ಪಿಸಿದರೆ ಉತ್ತಮ ಎಂದ ಅವರು, ತನಿಖಾ ಸಂಸ್ಥೆಗಳು ನಿಷ್ಠೆಯಿಂದ ಶ್ರಮಿಸುತ್ತವೆ ಆದರೆ ಅಧಿಕಾರದಲ್ಲಿರುವ ಪಕ್ಷಗಳು ಹಾಗೂ ರಾಜಕಾರಣಿಗಳು ತನಿಖಾ ಸಂಸ್ಥೆಗಳು ನೀಡಿರುವ ಮಾಹಿತಿ ಮರೆಮಾಚುತ್ತವೆ ಎಂದು ಆರೋಪಿಸಿದರು.
ಹಾಸನದ ಹೆಣ್ಣು ಮಕ್ಕಳ ರಕ್ಷಣೆಗಾಗಿ ಅವರ ಬೆಂಬಲವಾಗಿ ನಿಲ್ಲಲು ಕೆ ಆರ್ ಎಸ್ ಪಕ್ಷವು ಮೇ 13 ರಂದು ರಾಜ್ಯಮಟ್ಟದಲ್ಲಿ ಹಾಸನ ಚಲೋ ಪ್ರತಿಭಟನಾ
ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಐದು ಸಾವಿರಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು ಹಿತೈಷಿಗಳು ಸ್ನೇಹಿತರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಎಲ್.ಎನ್.ಆನಂದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು, ಸಂಘಟನಾ ಕಾರ್ಯದರ್ಶಿ ಮಾರುತಿ, ತಾಲ್ಲೂಕು ರೈತ ಘಟಕದ ಅಧ್ಯಕ್ಷ ವಿಜಯಕುಮಾರ್ ತಾ. ಚಾಲಕರ ಘಟಕದ ಅಧ್ಯಕ್ಷ ವಿಜಯಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.