ಕೈಕೊಟ್ಟ ಇನ್ಸ್ಟಾಗ್ರಾಂ ಪ್ರೀತಿ ಆತ್ಮಹತ್ಯೆಗೆ ಶರಣಾದ ಪಾಗಲ್ ಪ್ರೇಮಿ

ದೊಡ್ಡಬಳ್ಳಾಪುರ: ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದ ಯುವಕ, ಯುವತಿ ಕೈ ಕೊಟ್ಟ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೊಡಿಗೇಹಳ್ಳಿಯಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಯುವಕನನ್ನು ಬಾಲಾಜಿ(22) ಎಂದು ಗುರುತಿಸಲಾಗಿದೆ. ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಾಲಾಜಿಗೆ ಕೆಲ ತಿಂಗಳುಗಳ ಹಿಂದೆ ಇನ್ಸ್ಟಾ ಗ್ರಾಂನಲ್ಲಿ ಕನಕಪುರ ಮೂಲದ ಯುವತಿಯ ಪರಿಚಯವಾಗಿತ್ತು. ಆ ಪರಿಚಯ ಪ್ರೀತಿಗೆ ತಿರುಗಿತ್ತು.

ಕಳೆದ‌ ಒಂದು ತಿಂಗಳ ಹಿಂದೆ ಯುವತಿಗೆ ಕರೆ ಮಾಡಿದಾಗ ಆಕೆ, ತಾನು ಪ್ರೀತಿಸುತ್ತಿರುವ ಮತ್ತೊಬ್ಬ ಯುವಕನೊಂದಿಗೆ ಕಾನ್ಫರೆನ್ಸ್ ಕಾಲ್ ನಲ್ಲಿ ಮಾತನಾಡಿಸಿದ್ದಾಳೆ. ಇದರಿಂದ ಮನನೊಂದ ಪ್ರಿಯಕರ ಬಾಲಾಜಿ ಇಂದು ಕೃಷಿ ಉತ್ಪನ್ನಗಳ ರಕ್ಷಣೆಗೆ ಬಳಸುವ ಕಾಳು ಮಾತ್ರೆ ಸೇವಿಸಿ ಆತ್ಮಹತ್ಯೆ‌ ಮಾಡಿಕೊಂಡಿದ್ದಾನೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.