*ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಘೋಷಣೆ: ಸಿಎಂ ಸಿದ್ಧರಾಮಯ್ಯಗೆ ಕೆಯುಡಬ್ಲ್ಯುಜೆ ಅಭಿನಂದನೆ*
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಹು ದಿನದ ಬೇಡಿಕೆಯಾಗಿದ್ದ ಗ್ರಾಮೀಣ ಪತ್ರಕರ್ತರರಿಗೆ ಬಸ್ ಪಾಸ್ ನೀಡುವ ಸಂಬಂಧ ಇತ್ತಿಚೆಗೆ ದಾವಣಗೆರೆಯಲ್ಲಿ ನಡೆದ 38ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಾತು ಕೊಟ್ಟಂತೆ ಈ ವರ್ಷದ ಬಜೆಟ್ ನಲ್ಲಿ ಅದನ್ನು ಘೋಷಣೆ ಸಹ ಮಾಡಿದ ಹಿನ್ನೆಲೆಯಲ್ಲಿ ಗುರುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗ ಅಭಿನಂದನೆ ಸಲ್ಲಿಸಿತು.
ರಾಜ್ಯದ ವಿವಿಧ ಜಿಲ್ಲೆಗಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯರು ರಾಜ್ಯದ ಅಡಳಿತದ ಶಕ್ತಿದೇಗುಲವಾದ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಕಚೇರಿಗೆ ತೆರಳಿ ಅಭಿನಂದನೆ ಪತ್ರ ಸಲ್ಲಿಸಿ ಅಭಿನಂದನಾ ಸಮಾರಂಭಕ್ಕೆ ಆಗಮಿಸಬೇಕೆಂದು ಮಾಡಿದ ಮನವಿಗೆ *ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಬಸ್ ಪಾಸ್ ಆದೇಶವನ್ನು ಶೀಘ್ರದಲ್ಲಿ ಅನುಷ್ಠಾನಗೊಳಿಸುವ ಭರವಸೆ ನೀಡಿದರು.* ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಅಭಿನಂದನಾ ಸಮಾರಂಭದ ದಿನಾಂಕ ನಿಗದಿ ಪಡಿಸಿ ಎಂದರು.
ರಾಜ್ಯದ ಸಾವಿರಾರು ಗ್ರಾಮೀಣ ಪತ್ರಕರ್ತರಿಗೆ ನಿಮ್ಮ ಘೋಷಣೆಯಿಂದ ತುಂಬ ಅನುಕೂಲ ಆಗಲಿದ್ದು, ನಿಮ್ಮ ಈ ಉದಾರತೆಗೆ ಪತ್ರಕರ್ತರ ಸಂಘ ಸದಾ ಚಿರರುಣಿಯಾಗಿರುತ್ತದೆ ಎಂದು ತಗಡೂರು ಹೇಳಿದರು. ಇದಕ್ಕೆ ಮುಖ್ಯಮಂತ್ರಿಗಳು ನಗುತ್ತಲ್ಲೆ ಕೈ ಜೋಡಿಸಿದರು. ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ,
ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಪುಂಡಲೀಕ ಭೀ. ಬಾಳೋಜಿ, ಭವಾನಿಸಿಂಗ್ ಠಾಕೂರ್, ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ರಾಜ್ಯ ಖಜಾಂಚಿ ವಾಸುದೇವ ಹೊಳ್ಳ, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಮದನಗೌಡ, ಗಣಪತಿ ಗಂಗೊಳ್ಳಿ, ಸತ್ಯಪ್ಪನವರ,
ಬೀದರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ವಿಜಯನಗರ ಜಿಲ್ಲಾಧ್ಯಕ್ಷ ಸತ್ಯನಾರಾಯಣ, ಮಂಗಳೂರು ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ
ಇಂದಾಜಿ,
ಭಾಸ್ಕರ್ ರೈ ಕಟ್ಟಾ, ಪುಷ್ಪರಾಜ್ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.