ಕಲ್ಯಾಣಿ ಜಾಗದಲ್ಲಿ ಶೌಚಾಲಯ ನಿರ್ಮಾಣಕ್ಕೆ ಸ್ಥಳೀಯರ ವಿರೋದ

ದೊಡ್ಡಬಳ್ಳಾಪುರ : ಬರೀ ಕಸದ ರಾಶಿ ತುಂಬಿದ್ದ ಸ್ಥಳವನ್ನು ಸ್ಥಳೀಯ ಸಾರ್ವಜನಿಕರು ತಮ್ಮ ಸ್ವಂತ ಖರ್ಚಿನಿಂದ ಶುಚಿಗೊಳಿಸಿ ಎಲ್ಲರಿಗೂ ಅನುಕೂಲವಾಗುವಂತೆ ಪಾರ್ಕ್ ನಿರ್ಮಾಣದ ಯೋಜನೆ ರೂಪಿಸಿದ್ದರು ಆದರೆ ದೊಡ್ಡಬಳ್ಳಾಪುರ ನಗರ ಸಭೆ ಆ ಜಾಗದಲ್ಲಿ ಶೌಚಾಲಯವನ್ನು ಕಟ್ಟಲು ಯೋಜನೆ ರೂಪಿಸಿರುವ ಹಿನ್ನಲೆ ವಿನಾಯಕ ನಗರ ಹಾಗೂ ರೋಜಿಪುರ ವಾರ್ಡ್ ನ ಸಾರ್ವಜನಿಕರು ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.
ನಗರದ ಕೋರ್ಟ್ ಮುಂಭಾಗ ಸಂಪೂರ್ಣ ಮುಚ್ಚಿ ಹೋಗಿದ್ದ ಕಲ್ಯಾಣಿ ಪ್ರದೇಶವನ್ನು ಸ್ಥಳೀಯ ಸಾರ್ವಜನಿಕರು ಹಾಗೂ ಮುಖಂಡರು ದೇಣಿಗೆ ಸಂಗ್ರಹಿಸುವ ಮೂಲಕ ಶುಚಿಗೊಳಿಸಿ ಸಾರ್ವಜನಿಕರಿಗೆ ಅನುಕೂಲವಾದ ರೀತಿಯಲ್ಲಿ ಪಾರ್ಕ್ ಯೋಜನೆ ರೂಪಿಸಿದ್ದರು.
ಆದರೆ ಹಠಾತ್ತಾಗಿ ನಗರಸಭೆ ಸಾರ್ವಜನಿಕ ಸುಲಭ ಶೌಚಾಲಯ ನಿರ್ಮಿಸಲು ಮುಂದಾಗಿದ್ದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ. ಈ ಕುರಿತು ಪ್ರತಿಭಟನೆಗೆ ಮುಂದಾಗಿರುವ ಸ್ಥಳೀಯರು ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ ನಗರಸಭಾ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದ್ದಾರೆ.

ಸ್ಥಳೀಯ ಮುಖಂಡರಾದ ದಯಾನಂದ್ ಮಾತನಾಡಿ ಸ್ಥಳೀಯ ನಗರ ಸಭೆ ರೂಪಿಸಿರುವ ಯೋಜನೆ ಸರಿಯಿಲ್ಲ ಕಾರಣ ನಗರದ ಕೋರ್ಟ್ ಅವರಣಕ್ಕೆ ಕೇವಲ 300 ಮೀಟರ್ ದೂರದಲ್ಲಿ ಎರಡು ಸುಲಭ್ ಶೌಚಾಲಯಗಳನ್ನು ಈಗಾಗಲೇ ನಿರ್ಮಿಸಿದ್ದು ಸದರಿ ಶೌಚಾಲಯಗಳ ನಿರ್ವಹಣೆ ಮಾಡುವಲ್ಲಿ ದೊಡ್ಡಬಳ್ಳಾಪುರ ನಗರ ಸಭೆ ಸೋತಿದೆ. ಈಗ ಪಾರ್ಕ್ ನಿರ್ಮಿಸಲು ಯೋಜನೆ ರೂಪಿಸಿದ್ದ ಜಾಗದಲ್ಲಿ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿರುವುದರ ಹಿಂದಿನ ಉದ್ದೇಶ ಅರಿಯಬೇಕಿದೆ. ಈ ಸ್ಥಳದಲ್ಲಿ ಪುರತನ ಕಲ್ಯಾಣಿ ಇದ್ದು. ಕಲ್ಯಾಣಿ ಸಂರಕ್ಷಿಸುವಲ್ಲಿ ಸ್ಥಳೀಯ ಸಾರ್ವಜನಿಕರ ಪಾತ್ರ ಬಹಳಷ್ಟಿದೆ. ಆದರೆ ಇಂದು ದೊಡ್ಡಬಳ್ಳಾಪುರ ನಗರಸಭೆ ಸಾರ್ವಜನಿಕರ ಇಚ್ಛೆಗೆ ವಿರುದ್ಧವಾಗಿ ಕರ್ತವ್ಯ ನಿರ್ವಹಿಸಲು ಮುಂದಾಗಿದೆ ಎಂದರು.
ಸ್ಥಳೀಯ ರೈತ ಮುಖಂಡರಾದ ಸುಲೋಚನಾ ಮಾತನಾಡಿ ಪ್ರಸ್ತುತ ನಾವು ಕಾಣುತ್ತಿರುವ ಕಲ್ಯಾಣಿಯನ್ನು ಕಸ ಹಾಗೂ ತಾಜ್ಯ ವಸ್ತುಗಳಿಂದ ತುಂಬಲಾಗಿತ್ತು. ಸ್ಥಳೀಯರ ಸಹಾಯದಿಂದ ಎಲ್ಲರೂ ಒಗ್ಗೂಡಿ ಈ ಸ್ಥಳವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅನುವು ಮಾಡಿದೆವು. ಆದರೆ ಈಗ ಸಾರ್ವಜನಿಕರ ಭಾವನೆಗಳಿಗೆ ಬೆಲೆ ನೀಡದೆ ದೊಡ್ಡಬಳ್ಳಾಪುರ ನಗರ ಸಭೆ ಕಲ್ಯಾಣಿ ಸಮೀಪದ ಸ್ಥಳದಲ್ಲಿ ಶೌಚಾಲಯ ನಿರ್ಮಿಸಲು ಮುಂದಾಗಿದ್ದು. ಸ್ಥಳೀಯ ಸಾರ್ವಜನಿಕರ, ಮಕ್ಕಳ ಅರೋಗ್ಯಕ್ಕಾಗಿ ಪಾರ್ಕ್ ನಿರ್ಮಿಸುವ ಉದ್ದೇಶಕ್ಕೆ ಎಳ್ಳು ನೀರು ಬಿಟ್ಟಿದೆ. ನಗರಸಭೆ ಅಧಿಕಾರಿಗಳ ಈ ನಿರ್ಧಾರ ಬದಲಾಗಬೇಕಿದೆ ಕಲ್ಯಾಣಿ ಸುತ್ತ ಮುತ್ತಲು ಪಾರ್ಕ್ ನಿರ್ಮಿಸುವ ಮೂಲಕ ಸ್ಥಳೀಯ ಸಾರ್ವಜನಿಕರ ಭಾವನೆಗಳಿಗೆ ಸ್ಪಂದಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿಹಸನಘಟ್ಟ ರವಿ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರು, ಶಿವ ಶೇಖರಪ್ಪ, ರಮೇಶ್ ಆಚಾರ್, ಆರ್ ಎಂ ಮಹೇಶ್, ವಿಲಾಸ್, ದಾದಾಪೀರ್, ರುದ್ರೇಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
Post Views: 92