ಬೆಂಗಳೂರನ್ನು ಸುಸಜ್ಜಿತ ಮಹಾನಗರವನ್ನಾಗಿ ಕಟ್ಟಲು ಕೆಂಪೇಗೌಡರ ಕೊಡುಗೆ ಅಪಾರ : ಜಿಲ್ಲಾಧಿಕಾರಿ ಶಿಲ್ಪಾ ನಾಗ್

ಚಾಮರಾಜನಗರ:ವಿಶ್ವಪ್ರಸಿದ್ಧ ಬೆಂಗಳೂರನ್ನು ಸಣ್ಣ ಪಟ್ಟಣದಿಂದ ಸುಸಜ್ಜಿತ ಮಹಾನಗರವನ್ನಾಗಿ ಕಟ್ಟಲು ನಾಡಪ್ರಭು ಕೆಂಪೇಗೌಡ ಅವರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಭಿಪ್ರಾಯಪಟ್ಟರು.

ನಗರದ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತ ಮಾತ್ರವಲ್ಲ. ಇಡೀ ವಿಶ್ವಕ್ಕೆ ಪರಿಚಯವಾಗಿರುವ ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡ ಅವರದ್ದು ಸರ್ವಶ್ರೇಷ್ಠ ವ್ಯಕ್ತಿತ್ವ. ಕೆಂಪೇಗೌಡರು ದಾರ್ಶನಿಕ, ಅಪ್ರತಿಮ ಹಾಗೂ ದಕ್ಷ ಆಡಳಿತಗಾರರು ಆಗಿದ್ದರು. ಅವರ ಸ್ಪೂರ್ತಿಯುತ ಜೀವನ ಸಾಧನೆಯನ್ನು ಇಂದು ಎಲ್ಲರು ಅರಿಯಬೇಕಾಗಿದೆ. ಕೆಂಪೇಗೌಡರನ್ನು ಸ್ಮರಿಸುವ ಸಲುವಾಗಿ 2017ರಿಂದ ಸರ್ಕಾರದ ವತಿಯಿಂದ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದರು.

ಕುಡಿಯುವ ನೀರು ಹಾಗೂ ಕೃಷಿಗಾಗಿ ಅಂತರ್ಜಲ ವೃದ್ಧಿಯ ದೂರದೃಷ್ಠಿ ಚಿಂತನೆ ಹೊಂದಿದ್ದ ಕೆಂಪೇಗೌಡ ಅವರು ಬೆಂಗಳೂರಿನಾದ್ಯಂತ ಸಾಕಷ್ಟು ಕೆರೆಗಳನ್ನು ಕಟ್ಟಿಸಿದರು. ರಾಜಕಾಲುವೆಗಳನ್ನು ನಿರ್ಮಿಸಿದರು. ಸಾಮಾಜಿಕ ಸುಧಾರಣೆಗೆ ಹೆಚ್ಚು ಒತ್ತು ನೀಡಿದ್ದ ಕೆಂಪೇಗೌಡರು ಮಹಿಳೆಯರಿಗೆ ಸಮಾನ ಗೌರವಯುತ ಸ್ಥಾನಮಾನ ನೀಡಿದ್ದರು. ಇಂದಿನ ಯುವಜನರು ಕೆಂಪೇಗೌಡರ ಆದರ್ಶವನ್ನು ಅನುಸರಿಸಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಅಸಹಾಯಕರಿಗೆ ಸಹಾಯಹಸ್ತ ಚಾಚಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನ ಅವರು ಮಾತನಾಡಿ ಕೆಂಪೇಗೌಡ ಅವರು 500 ವರ್ಷಗಳ ಹಿಂದೆಯೇ ಬೆಂಗಳೂರು ಕಟ್ಟಲು ಅಡಿಗಲ್ಲು ಹಾಕಿದ್ದರು. ಇಂದು ಅದು ಮಾದರಿ ನಗರವಾಗಿ ಬೆಳೆದಿದೆ. ಕೆಂಪೇಗೌಡ ಅವರು ಒಂದೇ ಸಮುದಾಯಕ್ಕೆ ಸೀಮಿತ ವ್ಯಕ್ತಿಯಲ್ಲ. ಅವರು ಎಲ್ಲಾ ವರ್ಗಗಳ ಜನರ ಶ್ರೇಯೋಭಿವೃದ್ಧಿಗೆ ಆದ್ಯತೆ ನೀಡಿದ್ದರು. ಅವರ ಆಡಳಿತ ಮಾದರಿಯನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕು ಎಂದರು.

ಮುಖ್ಯ ಭಾಷಣ ಮಾಡಿದ ಮೈಸೂರಿನ ದಕ್ಷಿಣ ವಲಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಡಾ. ಬಿ.ಸಿ. ವಿಜಯ್‍ಕುಮಾರ್ ಬಲ್ಲೇನಹಳ್ಳಿ ಅವರು ಮಾತನಾಡಿ ಬದುಕು ಪ್ರದರ್ಶನಕ್ಕಾಗಿ ಅಲ್ಲ, ನಿದರ್ಶನಕ್ಕಾಗಿ, ವಿಲಾಸಕ್ಕಲ್ಲ, ವಿಕಾಸಕ್ಕಾಗಿ ಎಂಬುದನ್ನು ಸಾಧಿಸಿ ತೋರಿಸಿದವರು ನಾಡಪ್ರಭು ಕೇಂಪೇಗೌಡ ಅವರು. ವಿಜಯನಗರದ ಸಾಮಂತ ರಾಜರಾಗಿದ್ದ ಕೆಂಪೇಗೌಡ ಅವರು ವಿಜಯನಗರದ ಮಾದರಿಯಲ್ಲಿಯೇ ಬೆಂಗಳೂರನ್ನು ಕಟ್ಟುವ ಆಶಯವನ್ನು ಹೊಂದಿದ್ದರು ಎಂದು ತಿಳಿಸಿದರು.

ಪ್ರಜೆಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಕೆಂಪೇಗೌಡ ಅವರು ಪಟ್ಟಣದ ಅಭ್ಯುದಯಕ್ಕಾಗಿ 3 ಸಾವಿರ ಕೆರೆಗಳನ್ನು ಕಟ್ಟಿಸಿದರು. ಸಮಾಜಮುಖಿಯಾಗಿದ್ದ ಕೆಂಪೇಗೌಡ ಅವರು ಆಡಳಿತಾತ್ಮಕ, ಸಾಮಾಜಿಕ, ಸಾಂಸ್ಕøತಿಕ ಪರಿಕಲ್ಪನೆ ಹೊಂದಿದ್ದರು. ಎಲ್ಲಾ ಸಮುದಾಯಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೆಂಗಳೂರನ್ನು ಕಟ್ಟಿದ ಕೆಂಪೇಗೌಡ ಅವರು ಜಾತ್ಯಾತೀತ ನಾಯಕರು ಹೌದು. ಸಿಲಿಕಾನ್ ಸಿಟಿ ಬೆಂಗಳೂರು ಇಂದು ವಿಸ್ತಾರವಾಗಿ ಬೆಳೆಯುತ್ತಿದೆ. ಅವರ ಸಾಮಾಜಿಕ ಪ್ರಜ್ಞೆ, ಸರ್ವಧರ್ಮ ಸಹಿಷ್ಣುತೆ ಇತರೆ ನಾಯಕರಿಗೂ ಆದರ್ಶಪ್ರಾಯವಾಗಿದೆ ಎಂದು ವಿಜಯ್‍ಕುಮಾರ್ ಬಲ್ಲೇನಹಳ್ಳಿ ಅವರು ತಿಳಿಸಿದರು.

ಸಮಾಜದ ತಾಲೂಕು ಅಧ್ಯಕ್ಷರಾದ ಪುಟ್ಟಸ್ವಾಮಿಗೌಡ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದೇ ವೇಳೆ ನಾಡಪ್ರಭು ಕೆಂಪೇಗೌಡ ಅವರ ಜೀವನ ಸಾಧನೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಏರ್ಪಡಿಸಿದ್ದ ಚಿತ್ರಕಲೆ, ಭಾಷಣ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಪಿ.ಯು.ಸಿ ಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ಪ್ರಮಾಣಪತ್ರ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪಿ. ಲಕ್ಷ್ಮೀ, ಸಮಾಜದ ಎಲ್ಲಾ ಮುಖಂಡರು, ಕನ್ನಡ ಪರ ಸಂಘಟನೆಗಳ ಮುಖಂಡರು, ಜಿಲ್ಲಾಮಟ್ಟದ ಅಧಿಕಾರಿಗಳು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.