ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಮಸೂದೆ ಜಾರಿಯಾಗದಿದ್ದರೆ ಉಗ್ರ ಹೋರಾಟಕರವೇ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ

ದೊಡ್ಡಬಳ್ಳಾಪುರ.., ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯನ್ನು ಅಧಿವೇಶನದಲ್ಲಿ ಅಂಗೀಕಾರ ಮಾಡಲು ಸರ್ಕಾರ ಮುಂದಾಗಿದ್ದು, ಇದಕ್ಕೆ ಕೆಲ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ ಕಾರಣವನ್ನು ಇಟ್ಟು ಕೊಂಡು ಸರ್ಕಾರ ಉದ್ಯೋಗ ಮೀಸಲಾತಿ ಅಂಗೀಕಾರ ತಡೆ ಹಿಡಿದದ್ದು ಖಂಡನೀಯ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ. ವಿ. ಪುರುಷೋತ್ತಮ್ ಗೌಡ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಅಂಗೀಕಾರ ತಡೆ ಬಗ್ಗೆ ಸುದ್ದಿ ಗಾರ ರೊಂದಿಗೆ ಪುರುಷೋತ್ತಮ್ ಗೌಡ ಮಾತನಾಡಿ, ರಾಜ್ಯದ ಉದ್ಯಮಿಗಳು ಸರ್ಕಾರದ ಸವಲತ್ತು ಗಳನ್ನು ಬಳಸಿಕೊಂಡು ಉದ್ಯಮವನ್ನು ಲಾಭದಾಯಕವಾಗಿ ನಡೆಸುತ್ತಿದ್ದಾರೆ.ಆದರೆ ಉದ್ಯೋಗ ವಿಚಾರದಲ್ಲಿ ಕನ್ನಡಿಗರನ್ನು ಸಂಪೂರ್ಣವಾಗಿ ಕಡೆಗಣಿಸಿ ಕೌಶಲ್ಯದ ನೆಪ ಒಡ್ಡಿ ಹೊರರಾಜ್ಯದವರಿಗೆ ಮಣೆ ಹಾಕಿರುವುದು ನಿಜಕ್ಕೂ ಖಂಡನಿಯ. ಈಗ ಸರ್ಕಾರ ಜಾರಿಗೆ ತರಲು ಹೊರಟಿದ್ದ ಕನ್ನಡಿಗರಿಗೆ ಸಂಪೂರ್ಣ ಉದ್ಯೋಗ ಮೀಸಲಾತಿ ಅಂಗಿಕಾರಕ್ಕೆ ವಿರೋಧ ವ್ಯಕ್ತ ಪಡಿಸುತ್ತಿರುವುದು ಸಹಿಸಲು ಅಸಾಧ್ಯ. ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಸುಮಾರು 40ವರ್ಷ ಗಳಿಂದ ಕನ್ನಡಿಗರು ಹೋರಾಟ ನಡೆಸಿದ್ದಾರೆ. ಅದರಲ್ಲೂ ಕರವೇ ಈ ಹೋರಾಟಗಳಲ್ಲಿ ಅವಿರತವಾಗಿ ತೊಡಗಿಸಿಕೊಂಡಿದೆ. ಆದರೆ ಪ್ರಸ್ತುತ ಸರ್ಕಾರ ಕನ್ನಡದ್ರೋಹಿ ಉದ್ಯಮಿಗಳ ಒತ್ತಡಕ್ಕೆ ಮಣಿಯದೆ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಅಂಗೀಕಾರ ಮಾಡಬೇಕಿದೆ. ಈ ವಿಚಾರದಲ್ಲಿ ಸರ್ಕಾರ ಮೀನಾಮೇಶ ಎಣಿಸದೆ ಮಸೂದೆ ಅಂಗೀಕಾರ ಮಾಡಿ ತಮ್ಮ ಕನ್ನಡ ಪರ ಕಾಳಜಿಯನ್ನು ಪ್ರದರ್ಶಿಸಬೇಕು. ಈ ವಿಚಾರದಲ್ಲಿ ರಾಜಿ ಮಾತಿಲ್ಲ. ಒಂದು ವೇಳೆ ಕನ್ನಡ ದ್ರೋಹಿ ಉದ್ಯಮಿಗಳ ಒತ್ತಡಕ್ಕೆ ಮಣಿದು ಮಸೂದೆ ಜಾರಿ ಮಾಡದಿದ್ದರೆ ಸರ್ಕಾರ ಹಾಗೂ ಕನ್ನಡ ದ್ರೋಹಿ ಉದ್ಯಮಿಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡರ ನೇತೃತ್ವದಲ್ಲಿ ರಾಜ್ಯವ್ಯಾಪಿ ಉಗ್ರ ಹೋರಾಟಕ್ಕೆ ಮುಂದಾಗಲಿದೆ ಎಂದು ಪುರುಷೋತ್ತಮ್ ಗೌಡ ಹೇಳಿದ್ದಾರೆ.