ಕೊಂಗಾಡಿಯಪ್ಪ ಕಾಲೇಜ್ ಎನ್. ಸಿ. ಸಿ. ಘಟಕದಿಂದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ
ದೊಡ್ಡಬಳ್ಳಾಪುರ:ಕಾರ್ಗಿಲ್ ಯುದ್ಧ ಭಾರತೀಯ ಪ್ರತಿಯೊಬ್ಬ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ . ಭಾರತೀಯರಲ್ಲಿ ದೇಶ ಪ್ರೇಮವನ್ನು ಮತ್ತು ಭಕ್ತಿಯನ್ನು ಅರ್ಪಿಸುವ ದಿನವನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಎನ್.ಸಿ.ಸಿ ನಿವೃತ್ತ ಅಧಿಕಾರಿ ಮೇಜರ್ ಎಸ್.ಮಹಾಬಲೇಶ್ವರ್ ತಿಳಿಸಿದರು.
ಅವರು ದೊಡ್ಡಬಳ್ಳಾಪುರ ನಗರದ ಶ್ರೀಕೊಂಗಾಡಿಯಪ್ಪ ಕಾಲೇಜಿನಲ್ಲಿ ಎನ್.ಸಿ.ಸಿ ಘಟಕದಿಂದ ನಡೆದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತೀಯರು ಅಪರೇಶನ್ ವಿಜಯ್ ಮೂಲಕ ಕಾರ್ಗಿಲ್-ದ್ರಾಸ್ ವಲಯದಲ್ಲಿ ಪ್ರದರ್ಶಿಸಿದ ಶೌರ್ಯದ ನೆನಪಿಗಾಗಿ ಈ ದಿನ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಸೈನಿಕರ ಗೌರವಾರ್ಥವಾಗಿ ಜುಲೈ ೨೬ ರಂದು ಕಾರ್ಗಿಲ್ ವಿಜಯ್ ದಿವಸ್ ದಿನವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. 1999 ಮೇ ತಿಂಗಳಿನಲ್ಲಿ ಆರಂಭವಾದ ಕಾರ್ಗಿಲ್ ಯುದ್ಧ ಜುಲೈ ಅಂತ್ಯದ ತನಕ ಅಂದರೆ ಸುಮಾರು ಎರಡು ತಿಂಗಳ ಕಾಲ ನಡೆಯಿತು. ಈ ಯುದ್ಧದಲ್ಲಿ ಲೇಹ್ ಹೆದ್ದಾರಿಯವರೆಗೆ ನುಗ್ಗಿ ಬಂದಿದ್ದ ಪಾಕ್ ಸೇನೆಯನ್ನು ಭಾರತೀಯ ಸೇನೆ ಕೆಚ್ಚೆದೆಯಿಂದ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಈ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ ಸುಮಾರು 527 ಭಾರತೀಯ ಯೋಧರು ಹುತಾತ್ಮರಾದರು ಎಂದರು.
ಕಾರ್ಗಿಲ್ ವಿಜಯೋತ್ಸವ ದಿನಾಚರಣೆಯ ಅಂಗವಾಗಿ ಎನ್.ಸಿ.ಸಿ ವಿದ್ಯಾರ್ಥಿಗಳು ಕಾರ್ಗಿಲ್ ಸೈನಿಕರನ್ನು ಸ್ಮರಿಸಿ ಭಾರತದ ಭೂಪಟ ರಚನೆ ಮಾಡಿ ದೀಪ ಬೆಳಗಿಸಿ ಗೌರವ ನಮನವನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶ್ರೀಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಆನಂದಮೂರ್ತಿ, ಉಪಪ್ರಾಂಶುಪಾಲ ಎಸ್.ಎಸ್.ಶಿವಶಂಕರ್, ಎನ್.ಸಿ.ಸಿ ಅಧಿಕಾರಿಗಳಾದ ಎನ್.ಶ್ರೀನಿವಾಸ, ಪ್ರವೀಣ್, ಶ್ರೀಕಾಂತ್ ಮತ್ತು ಎನ್.ಸಿ.ಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.