ಮೋರಿಗಳ ಘನ ತ್ಯಾಜ್ಯ ವಸ್ತುಗಳು ನಾಗರಕೆರೆ ಸೇರದಂತೆ ನಗರಸಭೆ ಯಿಂದ ಬಲೆ ಅಳವಡಿಕೆ

ದೊಡ್ಡಬಳ್ಳಾಪುರ : ತಾಲ್ಲೂಕಿನ ನಾಗರ ಕೆರೆಗೆ ರಾಜ ಕಾಲುವೆ ಹಾಗೂ ಮೋರಿಗಳ ಮುಖಾಂತರ ನಿರಂತರವಾಗಿ ಹಾಗೂ ಮಳೆ ಬಿದ್ದಾಗ ಬಂದು ಸೇರುತ್ತಿದ್ದ ಪ್ಲಾಸ್ಟಿಕ್ ವಸ್ತುಗಳನ್ನು ಹಾಗೂ ಘನ ತ್ಯಾಜ್ಯಗಳನ್ನು ತಡೆಗಟ್ಟಲು ಘನ ತ್ಯಾಜ್ಯದ ತಡೆಯ ಬಲೆಗಳನ್ನು ನಿರ್ಮಿಸಲಾಗಿದೆ.

ನಗರ ಭಾಗದ ಪ್ಲಾಸ್ಟಿಕ್ ಹಾಗೂ ಘನ ತ್ಯಾಜ್ಯ ವಸ್ತುಗಳು ಕೆರೆಯ ಸೇರಿ ಕೆರೆಯ ಜಲಮೂಲ ಸಂಪೂರ್ಣ ಹಾಳಾಗಿದ್ದು ಈ ಕುರಿತಂತೆ ನಾಗರಕೆರೆ ಜೀವ ವೈವಿಧ್ಯತೆ ಸಂರಕ್ಷಣಾ ಸಮಿತಿಯು ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದೆ. ತಡವಾದರೂ ಕೊನೆಗೆ ನಮ್ಮ ನಗರ ಸಭೆ ಸ್ಪಂದಿಸಿ ಈಗ ನಾಗರಕರೆಗೆ ಒಳಹರಿವು ಇರುವ ವಿವಿಧ ಕಾಲುವೆಗಳಿಗೆ ಘನ ತ್ಯಾಜ್ಯದ ತಡೆಯ ಬಲೆಗಳನ್ನು ನಿರ್ಮಿಸಲಾಗುತ್ತಿದೆ.

ನಿರ್ಮಿಸುವುದು ಖುಷಿ ವಿಚಾರವೇ.. ಆದರೆ ಇದರ ನಿರ್ವಹಣೆ ತುಂಬಾ ಮುಖ್ಯವಾಗಿದ್ದು ನಗರಸಭೆ ಈ ಕುರಿತು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕೆಂದು ಸಮಿತಿಯ ಮುಖಂಡ ಚಿದಾನಂದಮೂರ್ತಿ ತಿಳಿಸಿದರು.

ಸಾರ್ವಜನಿಕರು ಕಾಲುವೆಗಳಿಗೆ ಹಾಗೂ ಕೆರೆಗಳಿಗೆ ಕಸ ಬಿಸಾಡದಂತೆ ಸ್ವಚ್ಛತೆಯನ್ನು ಪಾಲನೆ ಮಾಡುವ ಮೂಲಕ ಜವಾಬ್ದಾರಿಯುತವಾಗಿ ಸಮಾಜದ ಸ್ವಚ್ಛತೆ ಕಾಪಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳು,ನಾಗರಕೆರೆ ಜೀವ ವೈವಿಧ್ಯತೆ ಸಂರಕ್ಷಣಾ ಸಮಿತಿಯ ಮುಖಂಡರು ಉಪಸ್ಥಿತರಿದ್ದರು.