*ಬ್ರಹ್ಮಶ್ರೀ ನಾರಾಯಣಗುರು, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್‌ ಮತ್ತು ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಜನ್ಮದಿನಾಚರಣೆ*

*ದೊಡ್ಡಬಳ್ಳಾಪುರ:* ಇಲ್ಲಿನ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣಗುರು, ಹಿಂದುಳಿದ ವರ್ಗಗಳ ಹರಿಕಾರ ಡಿ.ದೇವರಾಜ ಅರಸ್‌ ಹಾಗೂ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಜನ್ಮದಿನಾಚರಣೆಯನ್ನು ಆರ್.ಎಲ್.ಜೆ.ಐ.ಟಿ ಕ್ಯಾಂಪಸ್‌ನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ, ಗಣ್ಯರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮೂವರು ಮಹನೀಯರು ತಮ್ಮ ಕಾರ್ಯವ್ಯಾಪ್ತಿ ಮತ್ತು ಆಲೋಚನಾ ಬದ್ದತೆಯಿಂದ ದೇಶದ ಭವಿಷ್ಯವನ್ನು ಸದೃಢಗೊಳಿಸಿದ್ದಾರೆ. ಹಿಂದುಳಿದ ವರ್ಗಗಳ ದನಿಯಾಗಿ, ಯುವಜನರ ಆಶೋತ್ತರಗಳನ್ನು ಪ್ರಭಾವಿಸಿದ್ದು, ಅವರ ಆದರ್ಶಗಳು ಪಾಲನೀಯ ಎಂದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಶ್ರೀ ದೇವರಾಜ ಅರಸ್‌ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್‌, ಹುಟ್ಟಿನ ಜಾತಿಯ ಕಾರಣಕ್ಕೆ ವ್ಯಕ್ತಿ ಶ್ರೇಷ್ಠ ಅಥವಾ ಕನಿಷ್ಠವಾಗುವುದಿಲ್ಲ, ಆ ರೀತಿ ಭಾವಿಸಿದರೆ ಅದು ಧರ್ಮ ವಿರೋಧಿಯಾಗುತ್ತದೆ. ಅಸ್ಪೃಶ್ಯತೆ ಎಂಬ ರೋಗ ಮಾನವ ಸೃಷ್ಟಿ. ದೇವರ ಸೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದನ್ನು ತಮ್ಮದೇ ಆದ ಆಲೋಚನಾಕ್ರಮದ ಮೂಲಕ ನಾರಾಯಣಗುರುಗಳು ಪ್ರತಿಪಾದಿಸಿದರು. ಜ್ಞಾನಮಾರ್ಗ ಮತ್ತು ಕರ್ಮಮಾರ್ಗಗಳಿಂದ ಶ್ರೇಷ್ಠತೆಯನ್ನು ಸಾಧಿಸಬಹುದೆಂದು ತಿಳಿಸಿದ ಅವರು ಸಮಾನತೆಯ ಸಮಸಮಾಜ ಕಟ್ಟಲು ತಮ್ಮ ಜೀವನ ಮುಡಿಪಾಗಿಟ್ಟಿದ್ದರು ಎಂದರು.
ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಪ್ರಬಲ ಅಸ್ತಿತ್ವವನ್ನು ಪ್ರತಿಪಾದಿಸಿದ ಕೀರ್ತಿ ದೇವರಾಜ ಅರಸ್‌ ಅವರಿಗೆ ಸಲ್ಲುತ್ತದೆ. ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಉಳುವವನೇ ಭೂಮಿಯ ಒಡೆಯ ಎಂಬ ಘೋಷವಾಕ್ಯದಡಿ ಭೂ ಒಡೆತನವನ್ನು ಶೋಷಿತವರ್ಗಗಳಿಗೆ ನೀಡಿದರು. ಎಲ್.ಜಿ.ಹಾವನೂರ್‌ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿ, ಪ್ರಬಲ ಸಮುದಾಯಗಳ ನಡುಗೆ ಹಿಂದುಳಿದ ವರ್ಗಗಳಿಗೂ ಅವಕಾಶ ಮತ್ತು ಸಮಾನತೆಯನ್ನು ಒದಗಿಸುವ ಸಂಕಲ್ಪ ಮಾಡಿದರು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದ ಹೆಗ್ಗಳಿಕೆ ಅರಸು ಅವರದು ಎಂದು ಅಭಿಪ್ರಾಯಪಟ್ಟರು.
ಯುವಜನರ ಶಕ್ತಿಯಾಗಿದ್ದ ರಾಜೀವ್‌ಗಾಂಧಿ ಡಿಜಿಟಲ್‌ ಇಂಡಿಯಾದ ಪರಿಕಲ್ಪನೆಯನ್ನು ಜಾರಿಗೆ ತರುವ ಸಾಹಸ ಮಾಡಿದವರು. ಆರಂಭಿಕ ಕಾಲಘಟ್ಟದಲ್ಲಿ ದೂರ ಸಂಪರ್ಕ ಕ್ರಾಂತಿಗೆ ಮುನ್ನುಡಿ ಬರೆದ ಅವರು, ಮತದಾನದ ಹಕ್ಕು ವಯೋಮಿತಿಯನ್ನು 18 ವರ್ಷಕ್ಕೆ ಇಳಿಸುವ ಮೂಲಕ ಯುವಶಕ್ತಿಯ ಪ್ರೇರಕರಾದರು. ಅವರ ಜನ್ಮದಿನದ ಸಂದರ್ಭದಲ್ಲಿ ಸದ್ಭಾವನಾ ದಿನಾಚರಣೆ ಆಚರಿಸುತ್ತಿರುವುದು ಅರ್ಥಪೂರ್ಣ ಎಂದರು.
ಇದೇ ವೇಳೆ ಸದ್ಭಾವನಾ ದಿನದ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು. ಆರ್‌ಎಲ್‌ಜೆಐಟಿ ಪ್ರಾಂಶುಪಾಲ ಡಾ.ವಿಜಯ್‌ ಕಾರ್ತಿಕ್, ಮಾನವ ಸಂಪನ್ಮೂಲ ನಿರ್ದೇಶಕ ಬಾಬುರೆಡ್ಡಿ ನಾಗಸಂದ್ರ, ಉಪಪ್ರಾಂಶುಪಾಲ ಡಾ.ಶಿವಪ್ರಸಾದ್, ಪದವಿ ಕಾಲೇಜು ಪ್ರಾಂಶುಪಾಲ ಡಾ.ನಾಗರಾಜ್, ಪಾಲಿಟೆಕ್ನಿಕ್‌ ಕಾಲೇಜು ಪ್ರಾಂಶುಪಾಲ ಪ್ರೊ.ನರಸಿಂಹರೆಡ್ಡಿ, ಐಟಿಐ ಕಾಲೇಜು ಪ್ರಾಂಶುಪಾಲ ರವಿಕುಮಾರ್, ಪಿಯು ಕಾಲೇಜು ಪ್ರಾಂಶುಪಾಲ ಮಹಂತೇಶಪ್ಪ, ಪ್ರೌಢಶಾಲೆ ಮುಖ್ಯಶಿಕ್ಷಕ ಜಿಯಾವುಲ್ಲಾಖಾನ್, ವಸತಿ ಶಾಲೆ ಪ್ರಾಂಶುಪಾಲ ಧನಂಜಯ್, ಎಸ್‌ಡಿಯುಐಎಂ ಆಡಳಿತಾಧಿಕಾರಿ ಐ.ಎಂ.ರಮೇಶ್‌ಕುಮಾರ್, ವ್ಯವಸ್ಥಾಪಕ ಯತಿನ್, ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್, ವಿವಿಧ ಘಟಕಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಪಾಲ್ಗೊಂಡರು.