ಲಾರಿ ಗೇರ್ ಬಾಕ್ಸ್ ಬಿದ್ದು ಮೆಕಾನಿಕ್ ಸಾವು

ದೊಡ್ಡಬಳ್ಳಾಪುರ : ಲಾರಿಯ ಗೇರ್ ಬಾಕ್ಸ್ ಮೇಲೆ ಬಿದ್ದು ಮೆಕ್ಯಾನಿಕ್ ಒಬ್ಬರು ಮೃತಪಟ್ಟಿರುವ ಘಟನೆ ರಘುನಾಥಪುರದ ಜೆಕೆ ಪೇಂಟ್ಸ್ ಬಳಿ ನಡೆದಿದೆ.

ಮೃತ ವ್ಯಕ್ತಿ ನಗರದ ಜೋಗಹಳ್ಳಿ ನಿವಾಸಿ ಮನ್ಸೂರ್ (40) ಎಂದು ತಿಳಿದುಬಂದಿದೆ.

ಮನ್ಸೂರ್, ದೇವನಹಳ್ಳಿ ರಸ್ತೆಯ ಜೆಕೆ ಪೇಂಟ್ಸ್ ಬಳಿ ಲಾರಿ ಮೆಕಾನಿಕ್ ಅಂಗಡಿ ಇಟ್ಟುಕೊಂಡಿದ್ದರು. ಮಂಗಳವಾರ ಮಧ್ಯಾನ್ಹ ಲಾರಿ ಗೇರ್ ಬಾಕ್ಸ್ ಬಿಚ್ಚುವಾಗ ಆಯಾತಪ್ಪಿ ಗೇರ್ ಬಾಕ್ಸ್ ಮನ್ಸೂರ್ ತಲೆಯ ಮೇಲೆ ಬಿದ್ದಿದೆ. ಗಾಯಗೊಂಡ ಮನ್ಸೂರ್ ಅವರನ್ನು ತಕ್ಷಣ ಮಣಿಪಾಲ ಆಸ್ಫತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ತೀವ್ರವಾದ ಗಾಯವಾಗಿದ್ದರಿಂದ ಗಾಯಾಳುವನ್ನು ತಕ್ಷಣ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದಾರೆ. ನಿಮ್ಹಾನ್ಸ್ ಬಳಿ ಹೋದಾಗ ಆಸ್ಪತ್ರೆಯಲ್ಲಿ ವೆಂಟಿಲೇಟರ್ ವ್ಯವಸ್ಥೆ ಇಲ್ಲ ಬೇರೆ ಕಡೆ ಹೋಗಿ ಎಂದು ತಿಳಿಸಿದ್ದಾರೆ. ಹೀಗೆ ಗಾಯಾಳುವನ್ನು ಬೆಂಗಳೂರಿನಲ್ಲೇ ಒಟ್ಟು ಮೂರು ಆಸ್ಪತ್ರೆಗಳಿಗೆ ಆಲೆದಾಡಿಸಿದ್ದಾರೆ. ಆ ವೇಳೆಗಾಗಲೇ ತೀವ್ರ ರಕ್ತಸ್ರಾವವಾದ ಕಾರಣ ಮನ್ಸೂರ್ ನಿಧನರಾಗಿದ್ದಾರೆ.

ಸರಿಯಾದ ಸಮಯಕ್ಕೆ ವೈದ್ಯರು ಚಿಕಿತ್ಸೆ ನೀಡಿದ್ದರೆ ಮನ್ಸೂರ್ ಉಳಿಯುತ್ತಿದ್ದರು. ವೈದ್ಯರ ನಿರ್ಲಕ್ಷ್ಯ ಒಂದು ಜೀವ ಹೋಗಿದೆ ಎಂದು ಕುಟುಂಬಸ್ತರು ಆರೋಪಿಸಿದ್ದಾರೆ.

ಮೃತ ಮನ್ಸೂರ್ ಅವರಿಗೆ ಮಡದಿ ಮತ್ತು ಇಬ್ಬರು ಪುಟ್ಟ ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.