ಬಾರ್ ಅಂಡ್ ರೆಸ್ಟೋರೆಂಟ್ ತೆರೆಯದಂತೆ ಸಾರ್ವಜನಿಕರ ಪ್ರತಿಭಟನೆ
ದೊಡ್ಡಬಳ್ಳಾಪುರ : ನಗರದ 30ನೇ ವಾರ್ಡ್ ನಿವಾಸಿಗಳು ಸ್ಥಳೀಯವಾಗಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯದಂತೆ ಅಗ್ರಹಿಸಿ ನೂತನವಾಗಿ ಪ್ರಾರಂಭವಾಗುತ್ತಿರುವ ಮದ್ಯದ ಅಂಗಡಿ ಮುಂಭಾಗ ಪ್ರತಿಭಟನೆ ನೆಡೆಸಿದರು.
ನೂತನವಾಗಿ ಪ್ರಾರಂಭಗೊಳ್ಳಲು ಸಿದ್ದವಾಗಿರುವ ಬಾರ್ ಅಂಡ್ ರೆಸ್ಟೋರೆಂಟ್ ಮುಂಭಾಗ ಸ್ಥಳೀಯ ನಗರಸಭಾ ಮುಖಂಡರ ನೇತೃತ್ವದಲ್ಲಿ ಸಾರ್ವಜನಿಕರು ಬಾರ್ ತೆರೆಯದಂತೆ ಪ್ರತಿಭಟನೆ ನೆಡೆಸಿದರು.
ಈ ಕುರಿತು 30ನೇ ವಾರ್ಡ್ ನ ನಗರಸಭಾ ಸದಸ್ಯೆ ಪ್ರಭ ನಾಗರಾಜ್ ಮಾತನಾಡಿ ನಾವು ಬಾರ್ ಮಾಲೀಕರಿಗೆ ಇಲ್ಲಿ ಸಾರಾಯಿ ಅಂಗಡಿ ತೆರೆಯದಂತೆ ನಿರಂತರವಾಗಿ ಮನವಿ ಮಾಡಿದ್ದೇವೆ.ಸ್ಥಳೀಯ ಸಾರ್ವಜನಿಕರ ವಿರೋಧದ ನಡುವೆಯೂ ಬಾರ್ ತೆರೆಯಲು ಮುಂದಾಗಿರುವ ಬಾರ್ ಮಾಲೀಕರ ವಿರುದ್ಧ ಇಂದು ಸ್ಥಳೀಯ ನಿವಾಸಿಗಳು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಈ ರಸ್ತೆಯಲ್ಲಿ ಹಲವು ಶಾಲೆಗಳಿದ್ದು ನೂರಾರು ಶಾಲಾ ಮಕ್ಕಳು ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚಾರಿಸುತ್ತಾರೆ. ಬಾರ್ ತೆರೆದರೆ ಹೆಣ್ಣು ಮಕ್ಕಳು ಓಡಾಡಲು ಅಸಾಧ್ಯ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಬಾರ್ ಗೆ ನೀಡಿರುವ ಅನುಮತಿ ರದ್ದುಗೊಳಿಸಬೇಕೆಂದು ಮನವಿ ಮಾಡಿದರು.
ಬಾರ್ ಮಾಲೀಕ ಪ್ರದೀಪ್ ಮಾತನಾಡಿ ಈ ಹಿಂದೆ ಇಸ್ಲಾಂ ಪುರ ಮುಖ್ಯ ರಸ್ತೆಯಲ್ಲಿ ಇದ್ದ ಜನನಿ ಬಾರ್ ಅನ್ನು ಇಲ್ಲಿಗೆ ಸ್ಥಳಾಂತರಿಸಿದ್ದೇವೆ. ಕಾನೂನು ಬದ್ದವಾಗಿ ಪ್ರತಿ ಇಲಾಖೆಯಿಂದಲೂ ಅನುಮತಿ ಪಡೆದಿದ್ದೇವೆ ಸ್ಥಳೀಯ ಕೆಲ ಮುಖಂಡರು ಬೇಕಂತಲೇ ಪ್ರತಿಭಟನೆ ಮಾಡಿಸಲು ಮುಂದಾಗಿದ್ದಾರೆ. ತಮ್ಮ ವೈಯಕ್ತಿಕ ಲಾಭಕ್ಕಾಗಿ ಸಾರ್ವಜನಿಕರಿಗೆ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸ್ಥಳೀಯ ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು.