ದೌರ್ಜನ್ಯ ತಡೆಗಾಗಿ ಗ್ರಾಮೀಣ ಭಾಗದಲ್ಲಿ ವ್ಯಾಪಕ ಅರಿವು ಮೂಡಿಸಿ –ಜಿ.ಪಂ. ಸಿ.ಇ.ಒ ಮೋನಾ ರೋತ್
ಚಾಮರಾಜನಗರ:ದೌರ್ಜನ್ಯ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಗ್ರಾಮೀಣ ಭಾಗದಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಪ್ರತಿಬಂಧಕ ಕಾಯ್ದೆಯ ಬಗ್ಗೆ ವ್ಯಾಪಕ ಅರಿವು ಮೂಡಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರಕರಣಗಳ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಜನರ ಮೇಲೆ ನಿರಂತರವಾಗಿ ದೌರ್ಜನ್ಯ ಪ್ರಕರಣಗಳು ಜರುಗುತ್ತಿವೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ತಡೆಯಲು ದೌರ್ಜನ್ಯ ತಡೆ ನಿಯಂತ್ರಣ ಕಾಯ್ದೆ ಕುರಿತ ವಿಚಾರಸಂಕಿರಣ, ಕಾರ್ಯಗಾರಗಳು, ಕಲಾವಿದರಿಂದ ಬೀದಿನಾಟಕ ಏರ್ಪಡಿಸುವ ಮೂಲಕ ಜನಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ಜಿಲ್ಲೆಯಲ್ಲಿ 2024ರ ಜನವರಿಯಿಂದ ಅಕ್ಟೋಬರ್ 9ರವರೆಗೆ ಒಟ್ಟು 29 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 20 ಪ್ರಕರಣಗಳನ್ನು ಇತ್ಯರ್ಥಪಡಿಸಿ ಪರಿಹಾರ ವಿತರಿಸಲಾಗಿದೆ. ವಿಚಾರಣೆ ಹಂತದಲ್ಲಿರುವ 9 ಪ್ರಕರಣಗಳಿಗೆ ಅವಶ್ಯ ದಾಖಲಾತಿಗಳನ್ನು ಸಲ್ಲಿಸುವಂತೆ ತಿಳಿಸಲಾಗಿದ್ದು, ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಿ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ಪರಿಹಾರ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯರು ಮಾತನಾಡಿ ಜನಜಾಗೃತಿ ಕಾರ್ಯಕ್ರಮಗಳನ್ನು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೋನಿಗಳನ್ನು ಹೊರತುಪಡಿಸಿ ದಲಿತೇತರ ಬೀದಿಗಳಲ್ಲಿ ಆಯೋಜಿಸಬೇಕು ಸಮಾಜದ ಎಲ್ಲಾ ಸಮುದಾಯದವರನ್ನು ಒಂದೆಡೆ ಸೇರಿಸಿ ದೌರ್ಜನ್ಯ ತಡೆ ನಿಯಂತ್ರಣ ಕಾಯ್ದೆಯ ಪರಿಣಾಮಗಳ ಬಗ್ಗೆಸಂಪೂರ್ಣ ಅರಿವು ಮೂಡಿಸಬೇಕು. ಆಗಮಾತ್ರ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಲಿವೆ. ಕಾರ್ಯಾಗಾರಗಳ ವಿಚಾರಧಾರೆ ಹಾಗೂ ಬೀದಿನಾಟಕಗಳ ಸ್ಕ್ರಿಪ್ಟ್ ವಿಷಯಗಳು ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಯವರಿಂದ ಪರಿಶೀಲನೆ ಹಾಗೂ ಅಂತಿಮ ಅನುಮೋದನೆಯಾಗಬೇಕು ಎಂದರು.
ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ದೌರ್ಜನ್ಯ ಸಮಿತಿ ಸಭೆಗೆ ನ್ಯಾಯಾಲಯದ ವಿಶೇಷ ಅಭಿಯೋಜಕರನ್ನು ಹಾಗೂ ಅರಣ್ಯ ಇಲಾಖೆ ಮುಖ್ಯ ಅಧಿಕಾರಿಗಳನ್ನು ಕಡ್ಡಾಯವಾಗಿ ಆಹ್ವಾನಿಸಬೇಕು. ಆದಿವಾಸಿ ಪ್ರದೇಶಗಳಿಗೆ ಸಮರ್ಪಕ ರಸ್ತೆ, ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು. ಸರ್ಕಾರದಿಂದ ಮನೆ ಮಂಜೂರಾದ ಸಂದರ್ಭದಲ್ಲಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯುವ ಗ್ರಾಮಸಭೆಗಳಲ್ಲಿ ಆದಿವಾಸಿ ಜನರಿಗೆ ಶೇ. 2ರಿಂದ 5ರಷ್ಟು ಮನೆಗಳನ್ನು ಮೀಸಲಿಡಬೇಕು. ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯರಿಗೆ ಗುರುತಿನ ಚೀಟಿ ನೀಡಬೇಕು. ಪೊಲೀಸ್ ಕಚೇರಿ ವಹಿ (ರಿಜಿಸ್ಟರ್)ಯಲ್ಲಿ ದೌರ್ಜನ್ಯ ಪ್ರಕರಣಗಳನ್ನು ನಮೂದಿಸುವಂತೆ ಸಮಿತಿ ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ ಕವಿತಾ ಅವರು ಪೊಲೀಸ್ ಕಚೇರಿಯಲ್ಲಿ ದೌರ್ಜನ್ಯ ಪ್ರಕರಣಗಳ ದಾಖಲಾತಿ ಇದೆ. ಅಪರಾಧ ವಹಿಯಲ್ಲಿ ಯಾವುದೇ ಪ್ರಕರಣಗಳು ತಪ್ಪಿಹೋಗದಂತೆ ನಮೂದಿಸಲಾಗುತ್ತಿದೆ. ಆ ಮೂಲಕ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ಥರಿಗೆ ಪರಿಹಾರ ದೊರಕಿಸಿ ನ್ಯಾಯ ಒದಗಿಸಲು ಇಲಾಖೆ ಮುಂದಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮುನಿರಾಜು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ಎಸ್. ಬಿಂದ್ಯಾ, ಉಪವಿಭಾಗಾಧಿಕಾರಿ ಮಹೇಶ್, ತಹಶೀಲ್ದಾರ್ರಾದ ಗಿರಿಜ, ಐ.ಈ. ಬಸವರಾಜು, ಜಯಪ್ರಕಾಶ್, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಸೋಮೇಶ್ವರ್, ಆರ್. ಸಿದ್ದರಾಜು, ಮುದ್ದಯ್ಯ, ಸಿದ್ದರಾಜು, ಜಿಲ್ಲಾಮಟ್ಟದ ಅಧಿಕಾರಿಗಳು, ಅರಣ್ಯಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ