ವಿಶೇಷಚೇತನರಿಗೆ ವಸತಿ ಶಾಲೆಗಳಲ್ಲಿ ನೇರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ : ಅಂಗವಿಕಲರ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತರಾದ ದಾಸ್ ಸೂರ್ಯವಂಶಿ ಸೂಚನೆ.

ಚಾಮರಾಜನಗರ:ನಗರದ ಜಿಲ್ಲಾ ಪಂಚಾಯತ್ ಕೆ.ಡಿ.ಪಿ ಸಭಾಂಗಣದಲ್ಲಿಂದು ಅಂಗವಿಕಲರ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಅನುಷ್ಠಾನ ಮತ್ತು ವಿಕಲಚೇತನರ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.

ವಿಶೇಷಚೇತನರಿಗೆ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳನ್ನು ಒದಗಿಸಬೇಕಿದೆ. ಸರ್ಕಾರಿ ವಸತಿ ಶಾಲೆಗಳಲ್ಲಿ ಪ್ರವೇಶ ಪರೀಕ್ಷೆ ನಡೆಸದೆ ವಿಶೇಷಚೇತನರಿಗೆ ಶೇ. 20 ರಿಂದ 25ರಷ್ಟು ನೇರವಾಗಿ ಸೀಟುಗಳನ್ನು ನೀಡಬೇಕು. ಇದರಿಂದ ವಿಶೇಷಚೇತನರ ಅನುಕೂಲವಾಗಲಿದೆ. ಈ ಮೂಲಕ ವ್ಯಾಸಂಗಕ್ಕೆ ಉತ್ತೇಜನ ನೀಡಬೇಕಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕ್ರಮವಹಿಸಬೇಕೆಂದು ತಿಳಿಸಿದರು.

ಶಾಲೆಗಳಲ್ಲಿ ಅಂಧ ಮಕ್ಕಳಿಗೆ ಬ್ರೈಲ್ ಇನ್ನಿತರ ಅನುಕೂಲವಾಗುವ ವ್ಯವಸ್ಥೆಗಳನ್ನು ಜಾರಿಗೆ ತರಬೇಕು. ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಕರನ್ನು ಅಂಧ ವಿದ್ಯಾರ್ಥಿಗಳ ಬೋಧನೆಗೆ ನಿಯೋಜಿಸಬೇಕು. ಅಂಧ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿಯೇ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಶಿಕ್ಷಣದ ನೈಜ ಉದ್ದೆಶ ಈಡೇರಿದಂತಾಗುವುದಿಲ್ಲ ಎಂದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ಅಂಧ ಮಕ್ಕಳ ಶಿಕ್ಷಣಕ್ಕಾಗಿಯೇ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ. ಮೂರು ತಿಂಗಳ ತರಬೇತಿ ಶಿಬಿರಗಳನ್ನು ಏರ್ಪಾಡು ಮಾಡಲಾಗುವುದು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಈ ಸಂಬಂಧ ವಿಸೃತವಾಗಿ ಚರ್ಚೆ ನಡೆಸಿ ಶಿಕ್ಷಣದ ಸುಧಾರಣೆಗೆ ಆದ್ಯ ಗಮನ ಹರಿಸಲಾಗುವುದು ಎಂದರು.

ಆಯುಕ್ತರಾದ ದಾಸ್ ಸೂರ್ಯವಂಶಿ ಅವರು ಆರೋಗ್ಯ ಇಲಾಖೆಯಿಂದ ವಿಶೇಷಚೇತನರಿಗೆ ಒದಗಿಸುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದ ವೇಳೆ ಅಂಗವಿಕಲತೆ ಹೋಗಲಾಡಿಸುವಲ್ಲಿ ಆರೋಗ್ಯ ಇಲಾಖೆಯ ಪಾತ್ರ ತುಂಬಾ ಮಹತ್ವದ್ದಾಗಿದೆ. ತಪಾಸಣೆ ಆರಂಭದಲ್ಲಿಯೇ ಅನಾರೋಗ್ಯದ ತೊಂದರೆಗಳನ್ನು ಪತ್ತೆಹಚ್ಚಿ ಸರಿಯಾದ ಸಮಯಕ್ಕೆ ಔಷದೋಪಚಾರ ಚಿಕಿತ್ಸೆ ನೀಡುವುದು ಮುಖ್ಯವಾಗುತ್ತದೆ. ವಿಶೇಷಚೇತನರ ಆರೋಗ್ಯದ ಬಗ್ಗೆ ಆರೋಗ್ಯ ಅಧಿಕಾರಿಗಳು ಹೆಚ್ಚಿನ ಕಾಳಜಿ ಹೊಂದಬೇಕು ಎಂದು ತಿಳಿಸಿದರು.

ಇನ್ನಿತರ ಇಲಾಖೆಗಳು ವಿಶೇಷಚೇತನರಿಗೆ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದ ಆಯುಕ್ತರು ಎಲ್ಲ ಇಲಾಖೆಗಳು ವಿಶೇಷಚೇತನರಿಗೆ ಇರುವ ಅವಕಾಶಗಳನ್ನು ಬಳಸಿಕೊಳ್ಳಲು ಕಾರ್ಯನಿರ್ವಹಿಸಬೇಕು. ಕಷ್ಟಕರ ಜೀವನ ನಡೆಸುವ ವಿಶೇಷಚೇತನರ ಕೆಲಸಗಳನ್ನು ಸಕಾಲಕ್ಕೆ ಮಾಡಿಕೊಡಬೇಕು. ಯೋಜನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸಿದರೆ ಅನುಕೂಲವಾಗಲಿದೆ. ಬೇರೆ ಜಿಲ್ಲೆಗಳಿಗೆ ಚಾಮರಾಜನಗರ ಮಾದರಿಯಾಗಬೇಕು. ವಿಶೇಷಚೇತನರಿಗೆ ಮೀಸಲಾಗಿರುವ ಅನುದಾನ ಹೆಚ್ಚಿನ ಪ್ರಮಾಣದಲ್ಲಿ ವಿನಿಯೋಗವಾಗಬೇಕು ಎಂದರು.

ಕಟ್ಟಡ ನಿರ್ಮಿಸುವಾಗ ಇಲಾಖೆಗಳು ವಿಕಲಚೇತನ ಸ್ನೇಹಿ ಸೌಕರ್ಯಗಳನ್ನು ಇರುವಂತೆ ನೋಡಿಕೊಳ್ಳಬೇಕು. ರ್ಯಾಂಪ್ ಸೇರಿದಂತೆ ವಿಶೇಷಚೇತನರು ಪ್ರವೇಶಿಸಲು ಅನುವು ಮಾಡಿಕೊಡುವ ಇನ್ನಿತರ ಆಧುನಿಕ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಕೆಎಸ್‍ಆರ್‍ಟಿಸಿ ಸೇವೆಗಳಲ್ಲಿ ವಿಶೇಷಚೇತನರಿಗೆ ನೆರವಾಗುವ ಸೌಲಭ್ಯಗಳು ಇರಬೇಕು ಎಂದು ಆಯುಕ್ತರಾದ ದಾಸ್ ಸೂರ್ಯವಂಶಿ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಉಪಕಾರ್ಯದರ್ಶಿ ಪಿ. ಲಕ್ಷ್ಮಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ವರದಿ ಆರ್ ಉಮೇಶ್ ಮಲಾರಪಾಳ್ಯ