ತೂಬಗೆರೆ ವೀರಶೈವ ಲಿಂಗಾಯತ ಮಹಾಸಭಾ ದಿಂದ ಬಸವ ಜಯಂತಿ ಆಚರಣೆ

ದೊಡ್ಡಬಳ್ಳಾಪುರ:ತಾಲೂಕಿನ ತೂಬಗೆರೆ ವೀರಶೈವ ಲಿಂಗಾಯತ ಸಮಾಜ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹೋಬಳಿ ಘಟಕದ ವತಿಯಿಂದ ಬಸವ ಜಯಂತಿ ಪ್ರಯುಕ್ತ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಶ್ವಾರ್ಚನೆ ಮಾಡಿ ಪ್ರಸಾದ ವಿನಿಯೋಗ ಮಾಡುವುದರ ಮೂಲಕ ಬಸವ ಜಯಂತಿಯನ್ನು ಆಚರಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಾಸಭಾ ಜಿಲ್ಲಾ ಯುವ ಘಟಕದ ಕಾರ್ಯದರ್ಶಿ ಉದಯ ಆರಾಧ್ಯ ರವರು ಮಾತನಾಡಿ 12 ನೇ ಯ ಶತಮಾನದಲ್ಲಿ ಬಿಜ್ಜಳ ರಾಜನ ಆಸ್ಥಾನದ ಪ್ರಧಾನಮಂತ್ರಿಯಾಗಿದ್ದ ಜಗಜ್ಯೋತಿ ಬಸವೇಶ್ವರರು ಸಮಾನತೆ, ಸಹೋದರತೆ, ಮತ್ತು ಶಾಂತಿಯನ್ನು ಆಧ್ಯಾತ್ಮಿಕ ಪ್ರಜಾಪ್ರಭುತ್ವ ಮೂಲಕ ಅನುಷ್ಠಾನಗೊಳಿಸಲು ಮುಂದಾದರು.

ಬ್ರಾಹ್ಮಣ್ಯ – ವೈದಿಕ ಪರಂಪರೆಗೆ ಸೇರಿದ ಅನಿಷ್ಟಗಳ ವಿರುದ್ಧ ಹೋರಾಡಿ ಶೋಷಿತ ವ್ಯಕ್ತಿಗಳ ಸುಧಾರಣೆಗೆ ನಿಂತ ಮಹಾ ಮಾನವತಾವಾದಿ ಬಸವಣ್ಣನವರು.
ಭಾರತ ಸಂವಿಧಾನವು ಬಸವಣ್ಣನವರ ಆಶಯಗಳಿಗೆ ಪೂರಕವಾಗಿದೆ ಆದ್ದರಿಂದ ಬಸವಣ್ಣನನ್ನು ಸರ್ಕಾರ ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ.

ಈ ಮೇರು ವ್ಯಕ್ತಿಯ ವಿಚಾರಧಾರೆಗಳನ್ನು ವಿಶ್ವಕ್ಕೆ ಪರಿಚಯಿಸಲು ಕರ್ನಾಟಕದ ಗಾಂಧಿಯಂದೇ ಪ್ರಸಿದ್ಧರಾಗಿರುವ ಹರ್ಡೇಕರ್ ಮಂಜಪ್ಪನವರು  1913ರಲ್ಲಿ ಮೊಟ್ಟ ಮೊದಲ ಬಾರಿಗೆ ಬಸವ ಜಯಂತಿ ಆಚರಣೆ ಜಾರಿಗೆ ತಂದರು. ಹಾಗೂ ಇಂದು ದೇಶದ ಸಂಸತ್ ಭವನದಲ್ಲಿ ಪ್ರಥಮಬಾರಿಗೆ ಬಸವ ಜಯಂತಿ ಆಚರಣೆ ನಡೆಯುತ್ತಿರುವುದು ಇಡೀ ರಾಜ್ಯದ ಗೌರವ ಎಂದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ್ ಮಾತಾನಾಡಿ ಬಸವ ಜಯಂತಿಯನ್ನು ನಮ್ಮ ಭಾಗದ ರೈತಾಪಿ ಜನರು ತಮ್ಮ ಮನೆಯ ಹಸುಗಳು ಎತ್ತುಗಳನ್ನು ಪೂಜಿಸುವುದು ಸಾಕೆತ್ತುಗಳಿಗೆ ವಿಶೇಷ ಭಕ್ಷಗಳನ್ನು ನೀಡಿ ಆಚರಿಸುತ್ತಾರೆ ಎಂದರು.

ವಾದ್ಯ -ಮೇಳದೊಂದಿಗೆ ಆರತಿ ಗಳನ್ನು ಹಿಡಿದ ಹೆಂಗಸರು,  ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವೇಶ್ವರಗೆ ಸ್ವಾಮಿ ಅರ್ಪಿಸಿದರು.
ನೂರಾರು ಭಕ್ತರು ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಬಸವ ಮೂರ್ತಿಗೆ ವಿಶೇಷ ಅಲಂಕಾರದೊಂದಿಗೆ ಪೂಜಿಸಿ ಭಕ್ತಿಭಾವ ಮೆರೆದರು. ಆಗಮಿಸಿದ ಎಲ್ಲ ಭಕ್ತಾದಿಗಳಿಗೆ ಪಾನಕ ಕೋಸಂಬರಿ ವಿತರಣೆ ನಡೆಯಿತು.

ವಿಶೇಷ ಪೂಜಾ ಕಾರ್ಯಕ್ರಮಗಳು ನಂತರ  ಸಂಜೆ ಬಸವೇಶ್ವರ ಮೂರ್ತಿ ಮೆರವಣಿಗೆ ನಡೆಯಿತು ವೀರಗಾಸೆ ಸೇರಿದಂತೆ ಅನೇಕ ಸಾಂಸ್ಕೃತಿಕ ತಂಡಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.

ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುನಿಲಕ್ಷ್ಮಮ್ಮ ರಾಮಕೃಷ್ಣ, ಕೆಪಿಸಿಸಿ ಸದಸ್ಯ ಎಸ್ ಆರ್ ಮುನಿರಾಜು, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು ಅಪ್ಪಯ್ಯಣ್ಣ, ತೆಂಗು ನಾರು ಮಂಡಳಿ ಅಧ್ಯಕ್ಷ ವೆಂಕಟೇಶ್ ಬಾಬು, ವಕೀಲ ಪ್ರತಾಪ್, ಮುಖಂಡರಾದ ವೆಂಕಟೇಶ್, ಜಗನ್ನಾಥ, ಕನಕದಾಸ, ನಾರಾಯಣಪ್ಪ, ಮುರುಳಿ, ರವಿಸಿದ್ದಪ್ಪ, ಕಸಾಪ ಅಧ್ಯಕ್ಷ ಕುಮಾರ್, ನಿವೃತ್ತ ಯೋಧ ಗೋಪಾಲ್, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಮಹಾನಂದ ಆರಾಧ್ಯ, ಬೇಕರಿ ಬಸವರಾಜ್, ವೀರಭದ್ರಾರಾಧ್ಯ, ಸೋಮಣ್ಣ, ರೇಣುಕಾರಾಧ್ಯ, ಲೋಕೇಶ್, ಜಗದೀಶ್ ಮತ್ತಿತರರು ಹಾಜರಿದ್ದರು.