ಶಿಕ್ಷಣ ವ್ಯವಸ್ಥೆ ವ್ಯಾಪಾರೀಕರಣ ವಾಗುತ್ತಿದೆ– ಸಂಜೀವ್ ನಾಯಕ್
ದೊಡ್ಡಬಳ್ಳಾಪುರ:ಸರ್ಕಾರಿ ಶಾಲೆಗಳಲ್ಲಿ ವ್ಯವಸ್ಥೆ ಹದಗೆಟ್ಟಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಪೋಷಕರಿಂದ ಸುಲಿಗೆ ಮಾಡುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕಿರುವ ಸರ್ಕಾರ ಕಣ್ಮುಚ್ಚಿ ಕುಳಿತಿರುವುದು ಖಂಡನೀಯ ಎಂದು ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್ ಬೇಸರ ವ್ಯಕ್ತ ಪಡಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡ ಪಕ್ಷದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಸಂಜೀವ್ ನಾಯಕ್ ಮಾತನಾಡಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಕೆಲವು ಮನದಂಡಗಳನ್ನು ವಿಧಿಸಿದ್ದು ಅದರ ಪ್ರಕಾರ ಶುಲ್ಕ ಪಡೆಯಬೇಕಿದೆ. ಆದರೆ ಸರ್ಕಾರದ ಮಾನದಂಡಗಳನ್ನು ಗಾಳಿಗೆ ತೂರಿ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣಕ್ಕೆ ವಾರ್ಷಿಕ ಇಪ್ಪತ್ತೈದು ಸಾವಿರದಿಂದ ಒಂದು ಲಕ್ಷದವರೆಗೂ ಶುಲ್ಕದ ನೆಪದಲ್ಲಿ ವಸೂಲಿ ಮಾಡುತ್ತಿವೆ. ಅದರಲ್ಲೂ ಬಡ, ಮಾಧ್ಯಮವರ್ಗಕ್ಕೆ ಅನುಕೂಲವಾಗಲೆಂದು ಸರ್ಕಾರ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣಕ್ಕೆ ಹಲವಾರು ರೀತಿಯ ಸೌಲಭ್ಯ ಒದಗಿಸಿದೆ. ಆದರೆ ಅದು ವ್ಯವಸ್ಥಿತವಾಗಿ ನಿರ್ಲಕ್ಷಕ್ಕೊಳಗಾಗಿದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳ ಉತ್ತಮ ವಿದ್ಯಾಭ್ಯಾಸದ ದೃಷ್ಟಿಯಿಂದ ಸರ್ಕಾರಿ ಶಾಲೆಗಳನ್ನು ಬಿಡಿಸಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಅಳುವ ಸರ್ಕಾರಗಳು ಶಿಕ್ಷಣ ವ್ಯವಸ್ಥೆಯತ್ತ ಗಮನ ಹರಿಸಿ ಗುಣ ಮಟ್ಟದ ಶಿಕ್ಷಣ ವ್ಯವಸ್ಥೆಗೆ ಕ್ರಮ ಕೈಗೊಂಡರೆ ಖಾಸಗಿ ಶಾಲೆಗಳನ್ನು ಮೀರಿಸುವ ಫಲಿತಾಂಶ ಸರ್ಕಾರಿ ಶಾಲೆಗಳಿಂದ ಪಡೆಯಬಹುದು. ಈ ವಿಚಾರದಲ್ಲಿ ಸರ್ಕಾರದ ನಿರಾಸಕ್ತಿ ಎದ್ದು ಕಾಣುತ್ತಿದೆ. ಸರ್ಕಾರದ ಅನುದಾನ ಪಡೆಯುತ್ತಿರುವ ಶಾಲೆಗಳು ಸೇರಿದಂತೆ ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವುದರಿಂದ ಬಡ ವರ್ಗಕ್ಕೆ ಹೆಚ್ಚು ತೊಂದರೆ ಯಾಗುತ್ತಿದೆ ಹೀಗಾಗಿ ಇಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕನ್ನಡ ಪಕ್ಷ ಇಲಾಖೆಯ ಮುಖ್ಯಸ್ಥರ ಗಮನಕ್ಕೆ ತರಲಾಗಿದೆ. ಇದನ್ನು ಪರಿಗಣಿಸಿ ಉನ್ನತಧಿಕಾರಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ ಹಾಕದಿದ್ದರೆ ಕನ್ನಡ ಪಕ್ಷ ಹೋರಾಟಕ್ಕೆ ಮುಂದಾಗುತ್ತದೆ ಎಂದು ಸಂಜೀವ್ ನಾಯಕ್ ಹೇಳಿದರು.
ಕನ್ನಡ ಪಕ್ಷದ ರಾಜ್ಯ ಕಾರ್ಯದರ್ಶಿ ಡಿ. ಪಿ. ಆಂಜನೇಯ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆದಿರುವುದರಿಂದ ಪೋಷಕರು ಖಾಸಗಿ ಶಾಲೆಗಳನ್ನು ಅವಲಂಬಿಸಿದ್ದಾರೆ. ಅದರಲ್ಲೂ ಬಡ, ಮಾಧ್ಯಮವರ್ಗ, ನೇಕಾರ ರೈತ ದಲಿತ ಶ್ರಮಿಕ ವರ್ಗದ ಜನರು ಗುಮಟ್ಟದ ಶಿಕ್ಷಣ ದೃಷ್ಟಿಯಿಂದ ಖಾಸಗಿ ಶಾಲೆಗಳತ್ತ ಮುಖ ಮಾಡಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಈಗಾಗಲೇ ದೈನಂದಿನ ವಸ್ತುಗಳ ಬೆಲೆ ಗಗನಕ್ಕೇರಿದ್ದು ಜನಸಾಮಾನ್ಯರು ಬದುಕು ಸಂಕಷ್ಟದಲ್ಲಿದೆ. ಆದರೂ ಸಹ ಇದ್ಯಾವುದನ್ನು ಲೆಕ್ಕಿಸದೆ ಖಾಸಗಿ ಶಾಲೆಗಳು ಮನಸೋ ಇಚ್ಛೆ ಶುಲ್ಕದ ನೆಪದಲ್ಲಿ ಬಡ ಮಾಧ್ಯಮ ವರ್ಗದ ಸುಲಿಗೆಗಿಳಿದಿರುವುದು ಖಂಡನೀಯ. ಸಾಲ ಸೋಲ ಮಾಡಿ ದುಬಾರಿ ಶುಲ್ಕ ನೀಡಿ ಶಿಕ್ಷಣ ಪಡೆಯುವ ದುರಂತ ಬಡವರ್ಗದ್ದು. ಇದನ್ನು ತಪ್ಪಿಸಲು ಸರ್ಕಾರದ ಆದೇಶವನ್ನು ಕಡೆಗಣಿಸುವ ಖಾಸಗಿ ಶಾಲೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಈ ಕೂಡಲೇ ಸಂಬಂಧ ಪಟ್ಟ ಎಲ್ಲಾ ಖಾಸಗಿ ಶಾಲೆಗಳಿಗೆ ಸರ್ಕಾರಿ ಮಾನದಂಡಗಳನ್ನು ಅಳವಡಿಸಿಕೊಂಡು ಶುಲ್ಕ ಪಡೆಯಲು ಅದೇಶಿಸಬೇಕು. ತಪ್ಪಿದ್ದಲ್ಲಿ ಖಾಸಗಿ ಶಾಲೆಗಳಿಗೆ ನೀಡಿರುವ ಪರವಾನಗಿಯನ್ನು ರದ್ದು ಮಾಡಬೇಕು. ಇಲ್ಲವಾದಲ್ಲಿ ಕನ್ನಡ ಪಕ್ಷ ಹೋರಾಟಕ್ಕೆ ಮುಂದಾಗುತ್ತದೆ ಎಂದು ಆಂಜನೇಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ವೆಂಕಟೇಶ್, ಗೌರವಾಧ್ಯಕ್ಷ ಆರ್. ರಂಗನಾಥ್, ಉಪಾಧ್ಯಕ್ಷ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ವಿ. ಪರಮೇಶ್ ಮುಖಂಡರಾದ ಬೋರೇಗೌಡ, ವೆಂಕಟೇಶ್, ಅಂಜನ್ ನಾಯಕ್ ಉಪಸ್ಥಿತರಿದ್ದರು.