ಗೋಕಾಕ್ ನಲ್ಲಿ ಯುವ ಸಮುದಾಯಕ್ಕಾಗಿ ಗಾಂಧಿ ಶಿಬಿರ
ಬೆಳಗಾವಿ : ಜಿಲ್ಲೆಯ,ಗೋಕಾಕ್ ತಾಲೂಕಿನ ಎನ್. ಎಸ್. ಹರ್ಡಿಕರ್ ಸೇವಾದಳ ತರಬೇತಿ ಕೇಂದ್ರದಲ್ಲಿ “ಯುವ ಸಮುದಾಯಕ್ಕಾಗಿ ಗಾಂಧಿ” ಎರಡನೇ ದಿನ ಮುಂದುವರೆಸಿ, ಇಂದು ಶಿಬಿರಾರ್ಥಿಗಳಿಗೆ ಅಟೆನ್ ಬರೋ ಅವರ “ಮಹಾತ್ಮ ಗಾಂಧೀ” ಚಲನಚಿತ್ರ ಪ್ರದರ್ಶನ ಮಾಡಲಾಯಿತು .
ಕಾರ್ಯಗಾರದಲ್ಲಿ ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಬೆಂಗಳೂರು ಇದರ ಕಾರ್ಯಾಧ್ಯಕ್ಷರಾದ ಎನ್ ಆರ್ ವಿಶುಕುಮಾರ್ ಅವರು ಶಿಬಿರಾರ್ಥಗಳಿಗೆ ಗಾಂಧೀ ಹಾಗು ಅವರ ಜೀವನ ಕುರಿತು ಇರುವ ಗೊಂದಲಗಳ ಬಗ್ಗೆ ಚರ್ಚೆ ಮತ್ತು ಸಂವಾದ ಮಾಡಿದರು. ಹಾಗೆ ಗಾಂಧಿಯ ವಿಚಾರಗಳು ಸಾರ್ವಕಾಲಿಕ ಮತ್ತು ಅವರು ನಾವು ಬದುಕುವ ಬದುಕಿನ ಪ್ರತೀ ದಿನ ಅವರು ನಮಗೆ ಕಾಡುತ್ತಾರೆ ಎಂದು ಹೇಳಿದರು.
ಗಾಂಧಿಯನ್ನು ಸಂಪೂರ್ಣವಾಗಿ ಓದಿದವರಿಗೆ ಮಾತ್ರ ಗಾಂಧೀ ಎಂತವರು ಎಂದು ತಿಳಿಯುತ್ತದೆ. ಅದಕ್ಕಾಗಿಯೇ ಜಿ ಎಸ್ ಶಿವರುದ್ರಪ್ಪ ಅವರು “ಗಾಂಧೀ ಬಂದು ಹೋದಾದ ಮೇಲೇ ಏನಾಗಿದೇ ಎಂದು ಹೇಳಲಾರೆ ಗಾಂಧೀ ಎದೆಗೆ ತಾಕಿದ್ದ ಗುಂಡು ನಮ್ಮೆದೇಗೂ ತಾಕಿದ್ದರೆ ಆ ಮಾತೆ ಬೇರೆ” ಎಂದು ಗಾಂಧೀ ಬಗ್ಗೆ ಬಹಳ ಅರ್ಥ ಪೂರ್ಣವಾಗಿ ಬರೆದಿದ್ದಾರೆ.
ಹಾಗೆ ಕುವೆಂಪು ಕೂಡಾ ಗಾಂಧಿಯ ಪ್ರಭಾವಕ್ಕೆ ಒಳಗಾಗಿ ‘ಗಾಂಧಿಯಿಲ್ಲದ ಜಗತ್ತು ತಗೆ ತಗೆ ಅದೆಲ್ಲಿಯ ಮಾತು’, ಎಂದು ಕನ್ನಡ ನಾಡಿನ ಇತರ ಬರಹಗಾರರು ಗಾಂಧಿಯ ಬಗ್ಗೆ ಬರೆದುದರ ಬಗ್ಗೆ ವಿಶ್ಲೇಷಣೆ ಮಾಡಿ ತಿಳಿಸಿದರು.
ಶಿಬಿರದ ನಿರ್ದೇಶಕರಾದ ವಿಜಯ ಹನಕೆರೆ ಅವರು ಲೇಖನವನ್ನು ಭಾವಪೂರ್ಣವಾಗಿ ಓದುವ ಕಲೆಯನ್ನು ತಿಳಿಸಿಕೊಟ್ಟರು.