ಕಲಾವಿದರು ಕಲೆ ಉಳಿಸುವ ಬಗ್ಗೆ ಆಸಕ್ತಿ ತೋರಬೇಕಿದೆ.. ಸಿ. ಹೆಚ್. ಕೃಷ್ಣ ಮೂರ್ತಿ

ದೊಡ್ಡಬಳ್ಳಾಪುರ : ಇಂದಿನ ಆಧುನಿಕ ತಂತ್ರಜ್ಞಾನ, ಮಾಧ್ಯಮಗಳ ಪ್ರಭಾವದ ನಡುವೆ ನಮ್ಮ ನೈಜ ಕಲೆಗಳು ಮರೆಯಾಗುತ್ತಿದ್ದು, ಕಲಾವಿದರು ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಹೆಚ್ಚಿನ ಆಸಕ್ತಿ ಹೊಂದ ಬೇಕಿದೆ ಎಂದು ಹಿರಿಯ ರಂಗ ಕಲಾವಿದ ಹಾಗೂ ತಾಲೂಕು ಕಲಾವಿದರ ಸಂಘದ ನಿರ್ದೇಶಕ ಸಿ.ಎಚ್.ಕೃಷ್ಣಮೂರ್ತಿ ಹೇಳಿದರು.

ನಗರದ ಕಲಾಭವನದಲ್ಲಿ ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘ, ಕನ್ನಡ ಮತ್ತು ಸಂಸ್ಕಂತಿ ಇಲಾಖೆ ನಡೆದ ಸಾಂಸ್ಕಂತಿಕ ಕಲಾ ಜ್ಯೋತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಂಗಕಲೆ ಹಾಗೂ ಜನಪದ ಕಲಾ ಪ್ರಕಾರಗಳಲ್ಲಿ ಯುವ ಪೀಳಿಗೆ ಭಾಗವಹಿಸುತ್ತಿರುವುದು ಕಡಿಮೆಯಾಗುತ್ತಿದ್ದು, ಶಾಲಾ ವಿದ್ಯಾರ್ಥಿಗಳು ಹಾಗೂ ಯುವ ಜನತೆ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ ಮಾತನಾಡಿ, ಕಲೆ ಸುಲಭವಾಗಿ ಒಗ್ಗುವುದಲ್ಲ. ಅದಕ್ಕೆ ಶ್ರದ್ದೆ, ಸಾಧನೆಗಳಿರಲೇಬೇಕು. ಆದರೆ ಇಂದಿನ ಆಧುನಿಕ ತಂತ್ರಜ್ಞಾನ ನಮ್ಮ ನೈಜ ಕಲೆಯನ್ನು ಮರೆಮಾಚುವ ಮೂಲಕ ಕಲಾವಿದರ ಅವಕಾಶಗಳನ್ನು ಕಸಿಯುತ್ತಿದೆ. ಕಲಾವಿದರು ಸಹ ಯಾವುದೇ ಪೂರ್ವಾಗ್ರಹ ಪೀಡಿತರಾಗದೇ ಕಲೆಯನ್ನು ಪಸರಿಸುವ ಕಾರ್ಯ ಮಾಡಬೇಕಿದೆ. ಎಂದಿಗೂ ನಿಜವಾದ ಕಲಾವಿದರಿಗೆ ಬೆಲೆ ಇದ್ದೇ ಇರುತ್ತದೆ ಎಂದರು.
ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ ಅದ್ಯಕ್ಷತೆ ವಹಿಸಿ ಮಾತನಾಡಿ, ಇಂದು ಸಿನಿಮಾ ಮತ್ತು ಮಾಧ್ಯಮಗಳ ಪ್ರಭಾವದ ನಡುವೆ ನಮ್ಮ ಪಾರಂಪರಿಕೆ ಕಲೆಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕಲಾವಿದರ ಸಂಕಷ್ಟಗಳನ್ನು ಅರ್ಥ ಮಾಡಿಕೊಳ್ಳಬೇಕು. ಕಲಾವಿದರಿಗೆ ಸೂಕ್ತ ಉತ್ತೇಜನ ನೀಡಬೇಕಿರುವುದು ಸಮುದಾಯದ ಹೊಣೆಯಾಗಿದೆ. ಪ್ರೋತ್ಸಾಹ ನೀಡಿದರೆ ಉತ್ತಮ ಕಲಾವಿದರು ರೂಪು ಗೊಳ್ಳುತ್ತಾರೆ. ಕಲಾವಿದರು ಸದಾ ಕ್ರಿಯಾಶೀಲ ರಾಗಿರಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಕಲಾವಿದರ ಸಂಘದ ಗೌ.ಅಧ್ಯಕ್ಷ ಎಸ್.ರಾಮಮೂರ್ತಿ. ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ್, ಉಪಾಧ್ಯಕ್ಷ ಎಚ್.ಪ್ರಕಾಶ್ ರಾವ್, ನರಸಿಂಹಯ್ಯ, ಖಜಾಂಚಿ ಎಚ್.ಮುನಿಪಾಪಯ್ಯ, ಸಹ ಕಾರ್ಯದರ್ಶಿ ಎ.ಮಂಜುನಾಥ್, ಯಕ್ಷಗಾನ ಕಲಾವಿದ ಕೆ.ಸಿ.ನಾರಾಯಣ್, ಸಲಹಾ ಸಮಿತಿಯ ಎಚ್.ವೀರೇಗೌಡ, ಸಂಚಾಲಕ ಶ್ರೀನಿವಾಸ್ ಸೇರಿದಂತೆ ಕಲಾವಿದರ ಸಂಘದ ಪದಾಕಾರಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ಅಂಗವಾಗಿ ತಾಲೂಕಿನ ವಿವಿಧ ಕಲಾವಿದರಿಂದ ರಂಗಗೀತೆ, ಜನಪದ ಗೀತೆ, ಭಜನೆ, ಭಕ್ತಿಗೀತೆಗಳ ಗಾಯನ ನಡೆಯಿತು